Select Location
All Locations
State
Region
City / District
ಹತ್ಯೆಯಾದ ಮೂರು ತಿಂಗಳ ನಂತರ ಇರಾನ್ ನಾಯಕ ಖಮೇನಿ ಶವಸಂಸ್ಕಾರಕ್ಕೆ ದಿನಾಂಕ ನಿಗದಿ

ಹತ್ಯೆಯಾದ ಮೂರು ತಿಂಗಳ ನಂತರ ಇರಾನ್ ನಾಯಕ ಖಮೇನಿ ಶವಸಂಸ್ಕಾರಕ್ಕೆ ದಿನಾಂಕ ನಿಗದಿ

ದುಬೈ: ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದ ಅಯಾತೊಲ್ಲಾ ಅಲಿ ಖಮೇನಿ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ರಾಜಧಾನಿ ಟೆಹರಾನ್‌ನಲ್ಲಿ ಜುಲೈ 4ರಂದು ಆರಂಭವಾಗಲಿದ್ದು, ಅವರ ತವರು ನಗರ ಮಷಾದ್‌ನಲ್ಲಿ ಜುಲೈ 9ರಂದು ಕೊನೆಗೊಳ್ಳಲಿದೆ. ಈ ಸಂಬಂಧ ಇರಾನ್‌ ಮಾಧ್ಯಮಗಳು ಶನಿವಾರ ಸುದ್ದಿ ಪ್ರಕಟಿಸಿವೆ. ಅಮೆರಿಕ ಹಾಗೂ ಇಸ್ರೇಲ್‌ ಪಡೆಗಳು ಫೆಬ್ರುವರಿ 28ರಂದು ಇರಾನ್‌ ಮೇಲೆ ದಾಳಿ ನಡೆಸಿದ್ದವು. 36 ವರ್ಷಗಳಿಂದ ಇಸ್ಲಾಮಿಕ್‌ ರಾಷ್ಟ್ರದ ಪರಮೋಚ್ಚ ನಾಯಕನಾಗಿದ್ದ 86 ವರ್ಷದ ಖಮೇನಿ ಸೇರಿದಂತೆ ಹಲವು ನಾಯಕರು ದಾಳಿ ವೇಳೆ ಹತ್ಯೆಯಾಗಿದ್ದರು. ಅಂತಿಮ ಸಂಸ್ಕಾರದ ವ್ಯವಸ್ಥೆಯ ಪಟ್ಟಿಯಲ್ಲಿ, ಟೆಹರಾನ್‌ ದಕ್ಷಿಣ ಭಾಗದಲ್ಲಿರುವ ಪವಿತ್ರ ನಗರ ಕೋಮ್‌ನಲ್ಲಿ ಜುಲೈ 7ರಂದು ನಡೆಯುವ ಕಾರ್ಯಕ್ರಮಗಳೂ ಸೇರಿವೆ.

ತಮ್ಮ ಅವಧಿಯಲ್ಲಿ ಇರಾನ್‌ ಅನ್ನು ಅಮೆರಿಕದ ಪ್ರಬಲ ವಿರೋಧಿಯಾಗಿ ರೂಪಿಸಿದ ಖ್ಯಾತಿ ಅಯಾತೊಲ್ಲಾ ಖಮೇನಿಯದ್ದು. ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಸಂಘಟನೆಯಂತಹ ಬಂಡುಕೋರ ಪಡೆಗಳ ಮೂಲಕ ಪಶ್ಚಿಮ ಏಷ್ಯಾದಾದ್ಯಂತ ಮಿಲಿಟರಿ ಪ್ರಭಾವ ವಿಸ್ತರಿಸಿದ್ದೂ ಅವರೇ. ಇರಾನ್‌ ಪರಮಾಣು ಕಾರ್ಯತಂತ್ರವನ್ನು ವಿಫಲಗೊಳಿಸುವ ಪ್ರಯತ್ನ ಮುಂದುವರಿಸಿರುವ ಅಮೆರಿಕದ ಕಟು ವಿರೋಧಿಯಾಗಿದ್ದರು.


Prajavani 2 hours ago
Home Flash News