ಫಿಫಾ ವಿಶ್ವಕಪ್ | ಗೊಂಝಾಲೊ ಅಮೋಘ ಆಟ: ನಾಕೌಟ್‌ಗೆ ಲಗ್ಗೆ ಇಟ್ಟ ಈಕ್ವೆಡಾರ್ ತಂಡ
ಈಸ್ಟ್ ರುದರ್‌ಫೋರ್ಡ್, ಅಮೆರಿಕ (ಎಪಿ): ಗೊಂಝಾಲೊ ಪ್ಲಾಟಾ ತಮ್ಮ ಕಾಲಿನ ಹೆಬ್ಬೆರಳಿನಿಂದ ಫ್ಲಿಕ್ ಮಾಡಿದ ಚೆಂಡು ಗೋಲು ಬಲೆಯೊಳಗೆ ನುಗ್ಗಿತು. ಅದರೊಂದಿಗೆ ಈಕ್ವೆಡಾರ್ ತಂಡವು ಬಲಿಷ್ಠ ಜರ್ಮನಿಯ ಎದುರು ಐತಿಹಾಸಿಕ ಜಯಸಾಧಿಸಿತು. ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತಕ್ಕೆ ಪ್ರವೇಶಿಸಿತು.
ಗುರುವಾರ ನಡೆದ ಪಂದ್ಯದ 77ನೇ ನಿಮಿಷದಲ್ಲಿ ಜರ್ಮನಿಯ ಗೋಲ್‌ಕೀಪರ್ ಮ್ಯಾನುವೆಲ್ ನ್ಯೂರ್ ಅವರ ಹಿಂದಿನಿಂದ ಗೋಲು ದಾಖಲಿಸಿದ ಪ್ಲಾಟಾ ಈಕ್ವೆಡಾರ್ ವಿಜಯದ ರೂವಾರಿಯಾದರು. ತಂಡವು 2–1ರಿಂದ ಜರ್ಮನಿಯನ್ನು ಸೋಲಿಸಿತು. 2006ರ ನಂತರ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯ ನಾಕೌಟ್ ಪ್ರವೇಶಿಸಿತು. ‘ಇನ್ನೂ ಜೀವನವೇ ಬೇರೆ. ಮೊದಲ ಎರಡು ಪಂದ್ಯಗಳಲ್ಲಿ ನಾವು ಬಹಳಷ್ಟು ತೊಂದರೆ ಅನುಭವಿಸಿದ್ದೇವೆ. ನಾವು ಬಹಳ ಮುಂಚೆಯೇ ಅರ್ಹತೆಯನ್ನು ಪಡೆಯಲು ಬಯಸಿದ್ದೆವು. ಆದರೆ ಈಗ ನಮ್ಮ ಹಸಿವು ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಜಯ ಸಿಕ್ಕಿದೆ’ ’ ಎಂದು ತನ್ನ ಒಂಬತ್ತನೇ ಅಂತರರಾಷ್ಟ್ರೀಯ ಗೋಲನ್ನು ಗಳಿಸಿದ 25 ವರ್ಷದ ವಿಂಗರ್ ಪ್ಲಾಟಾ ಹೇಳಿದರು. ಈಕ್ವೆಡಾರ್ ತಂಡವು ಕಳೆದ 22 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋತಿದೆ. ಟೂರ್ನಿಯ ‘ಇ’ ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತು ಮತ್ತು ಎರಡನೇ ಬಾರಿಗೆ ಗುಂಪು ಹಂತವನ್ನು ದಾಟಿತು.
ನಾಲ್ಕು ಬಾರಿ ಚಾಂಪಿಯನ್ ಆಗಿರುವ ಜರ್ಮನಿ ಇಲ್ಲಿ ತನ್ನ ಮೊದಲ ಎರಡು ಪಂದ್ಯಗಳನ್ನು ಗೆದ್ದಿತ್ತು. ಸೋಮವಾರ ಮೆಸಾಚ್ಯೂಸೆಟ್ಸ್‌ನಲ್ಲಿ ನಡೆಯಲಿರುವ 32 ರ ಘಟ್ಟದ ಪಂದ್ಯದಲ್ಲಿ ಆಡಲಿದೆ. ಆದರೆ ಜರ್ಮನಿ ತಂಡದ ಸತತ 11 ಪಂದ್ಯ ಜಯಿಸುವ ಕನಸಿಗೆ ಈಕ್ವೆಡಾರ್ ಅಡ್ಡಗಾಲು ಹಾಕಿತು. ಕ್ರೀಡಾಂಗಣದಲ್ಲಿ 80,663 ಜನ ಸೇರಿದ್ದರು. ಅದರಲ್ಲಿ ಬಹುತೇಕರು ಈಕ್ವೆಡಾರ್ಸ್ ತಂಡದ ಹಳದಿ ಜರ್ಸಿ ಧರಿಸಿದ್ದರು. ಆದರೆ ಪಂದ್ಯದ ಎರಡನೇ ನಿಮಿಷದಲ್ಲಿಯೇ ಜರ್ಮನಿಯ ಲೆರಾಯ್ ಸಾನೆ ಗೋಲು ಹೊಡೆದರು. ಜರ್ಮನಿಯ ಅಭಿಮಾನಿಗಳು ಸಂಭ್ರಮಿಸಿದರು. ಇದಾಗಿ ಏಳು ನಿಮಿಷಗಳ ನಂತರ ಈಕ್ವೆಡಾರ್‌ನ ನಿಲ್ಸನ್ ಆ್ಯಂಗುಲೊ ಗೋಲು ಗಳಿಸುವ ಮೂಲಕ 1–1ರ ಸಮಬಲ ಸಾಧಿಸಿದರು.