Raja Shivaji: ಓಟಿಟಿಗೆ ಬಂತು ರಿತೇಶ್ ದೇಶ್‌ಮುಖ್ ಅವರ ʼರಾಜಾ ಶಿವಾಜಿʼ ಸಿನಿಮಾ
ಮುಂಬೈ: ನಟ – ನಿರ್ದೇಶಕ ರಿತೇಶ್ ದೇಶ್‌ಮುಖ್ (Riteish Deshmukh) ಅವರು ಆಕ್ಷನ್ ಕಟ್ ಹೇಳಿದ್ದ ʼರಾಜಾ ಶಿವಾಜಿʼ (Raja Shivaji) ಸಿನಿಮಾವು ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ನಂತರ ಈ ಚಿತ್ರವು ಈಗ ಪ್ರೇಕ್ಷಕರ ಮನೆ ಬಾಗಿಲಿಗೆ ಬಂದಿದೆ. ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಆಧರಿಸಿದ ರಾಜಾ ಶಿವಾಜಿ, ಆ ವರ್ಷದ ಅತಿದೊಡ್ಡ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಮೇ 1ರಂದು ರಿಲೀಸ್ ಆದ ಈ ಚಿತ್ರವು ತನ್ನ ಥಿಯೇಟ್ರಿಕಲ್ ಪ್ರದರ್ಶನದ ಸಮಯದಲ್ಲಿ ವಿಶ್ವಾದ್ಯಂತ 130 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿತು. ಮರಾಠಿ ಚಿತ್ರರಂಗದಲ್ಲಿ ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಅಲ್ಲದೆ 2026 ರ ಎಂಟನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರವಾಗಿದೆ. ಮುಂಬೈ ಫಿಲ್ಮ್ ಕಂಪನಿ ಮತ್ತು ಜಿಯೋ ಸ್ಟುಡಿಯೋಸ್ ಅಡಿಯಲ್ಲಿ ಜೆನಿಲಿಯಾ ದೇಶಮುಖ್ ಮತ್ತು ಜ್ಯೋತಿ ದೇಶಪಾಂಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಭಾಗ್ಯಶ್ರೀ, ವಿದ್ಯಾ ಬಾಲನ್, ಫರ್ದೀನ್ ಖಾನ್, ಅಮೋಲ್ ಗುಪ್ತೆ, ಸಚಿನ್ ಖೇಡೇಕರ್, ಮಹೇಶ್ ಮಂಜ್ರೇಕರ್ ಮತ್ತು ಜೆನಿಲಿಯಾ ದೇಶ್ ಮುಖ್ ಜೊತೆಗೆ ರಿತೇಶ್ ದೇಶ್‌ಮುಖ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದೀಗ ರಿತೇಶ್ ದೇಶ್‌ಮುಖ್ ನಿರ್ದೇಶನದ ಈ ಸಿನಿಮಾವು ಓಟಿಟಿ ವೇದಿಕೆಯಲ್ಲಿ ರಿಲೀಸ್ ಆಗಿದೆ. ರಾಜಾ ಶಿವಾಜಿ ಚಿತ್ರ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಜೂನ್ 26, ಶುಕ್ರವಾರದಂದು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರದ ಡಿಜಿಟಲ್ ಪ್ರೀಮಿಯರನ್ನು ಘೋಷಿಸಿತು. “ವಿದ್ರೋಹ್ ಕರ್ನೇ ಆ ರಹೇ ಹೈ ರಾಜೇ. ಈಗ ಮರಾಠಿ ಮತ್ತು ಹಿಂದಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ರಾಜಾ ಶಿವಾಜಿಯನ್ನು ವೀಕ್ಷಿಸಿ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.