Select Location
All Locations
State
Region
City / District
'Operation Sindoor' ಕಾರ್ಯಾಚರಣೆಯಲ್ಲಿ ಹುತಾತ್ಮರಾದ 6 ಯೋಧರ ಹೆಸರು ಮೊದಲ ಬಾರಿಗೆ ಬಹಿರಂಗ

'Operation Sindoor' ಕಾರ್ಯಾಚರಣೆಯಲ್ಲಿ ಹುತಾತ್ಮರಾದ 6 ಯೋಧರ ಹೆಸರು ಮೊದಲ ಬಾರಿಗೆ ಬಹಿರಂಗ

ನವದೆಹಲಿ: ಕಳೆದ ವರ್ಷ ಮೇ ತಿಂಗಳಿನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ‘ಆಪರೇಷನ್ ಸಿಂದೂರ’ ಮಿಲಿಟರಿ ಕಾರ್ಯಾಚರಣೆಯ ವೇಳೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಾರತೀಯ ಸಶಸ್ತ್ರ ಪಡೆಯ ಆರು ಮಂದಿ ವೀರ ಯೋಧರ ಹೆಸರುಗಳನ್ನು ಕೇಂದ್ರ ಸರ್ಕಾರ ಮೊದಲ ಬಾರಿಗೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಭಾರತೀಯ ಭೂಸೇನೆಯ ಐದು ಜನ ಯೋಧರು ಹಾಗೂ ವಾಯುಸೇನೆಯ ಓರ್ವ ಯೋಧ ಸೇರಿದ್ದಾರೆ. ದೇಶಕ್ಕಾಗಿ ಬಲಿದಾನ ನೀಡಿದ ಈ ಹುತಾತ್ಮರ ಹೆಸರುಗಳನ್ನು ನವದೆಹಲಿಯಲ್ಲಿರುವ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ (ನ್ಯಾಷನಲ್ ವಾರ್ ಮೆಮೋರಿಯಲ್) ಕೆತ್ತಲಾಗುವುದು ಎಂದು ಸರ್ಕಾರ ತಿಳಿಸಿದೆ. ಹುತಾತ್ಮರಾದ ವೀರ ಯೋಧರನ್ನು ಸುಬೇದಾರ್ ಮೇಜರ್ ಪವನ್ ಕುಮಾರ್(Subedar Major Pawan Kumar), ರೈಫಲ್‌ಮ್ಯಾನ್ ಸುನಿಲ್ ಕುಮಾರ್(Rifleman Sunil Kumar), ಲ್ಯಾನ್ಸ್ ನಾಯ್ಕ್ ದಿನೇಶ್ ಕುಮಾರ್(Lance Naik Dinesh Kumar), ಅಗ್ನಿವೀರ್ ಮುರಳಿ ನಾಯ್ಕ್(Agniveer Murali Naik), ಹವಿಲ್ದಾರ್ ಸುನಿಲ್ ಕುಮಾರ್ ಸಿಂಗ್(Havildar Sunil Kumar Singh) ಮತ್ತು ಭಾರತೀಯ ವಾಯುಸೇನೆಯ ಸಾರ್ಜೆಂಟ್ ಸುರೇಂದ್ರ ಕುಮಾರ್(Sergeant Surendra Kumar ) ಎಂದು ಗುರುತಿಸಲಾಗಿದೆ. 2025 ರ ವಿವಿಧ ಸೇನಾ ಕಾರ್ಯಾಚರಣೆಗಳ ವೇಳೆ ದೇಶ ರಕ್ಷಣೆಗಾಗಿ ವೀರಮರಣ ಹೊಂದಿದ ಎಲ್ಲಾ ಸೈನಿಕರ ಅಧಿಕೃತ ಪಟ್ಟಿಯೊಂದಿಗೆ, ಆಪರೇಷನ್ ಸಿಂದೂರಿನ ಈ ಆರು ವೀರ ಯೋಧರ ಹೆಸರುಗಳನ್ನು ಕೂಡ ಪ್ರಕಟಿಸಲಾಗಿದೆ.

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶಾಶ್ವತ ಗೌರವ ನವದೆಹಲಿಯಲ್ಲಿರುವ ರಾಷ್ಟ್ರೀಯ ಸಮರ ಸ್ಮಾರಕದ 'ತ್ಯಾಗ ಚಕ್ರ' (ಬಲಿದಾನದ ವೃತ್ತ) ವಲಯವನ್ನು ದೇಶದ ಹೆಮ್ಮೆಯ ವೀರಪುತ್ರರಿಗಾಗಿ ಸಮರ್ಪಿಸಲಾಗಿದೆ. ಈ ವಲಯವು ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾದ 16 ವೃತ್ತಾಕಾರದ ಗೋಡೆಗಳನ್ನು ಹೊಂದಿದ್ದು, ಸ್ವಾತಂತ್ರ್ಯದ ನಂತರ ದೇಶದ ರಕ್ಷಣೆಗಾಗಿ ಪ್ರಾಣ ಮುಡುಪಾಗಿಟ್ಟ ಪ್ರತಿಯೊಬ್ಬ ಸೈನಿಕನ ಹೆಸರು, ಅವರ ಹುದ್ದೆ ಮತ್ತು ಅವರು ಸೇರಿದ್ದ ಸೇನಾ ತುಕಡಿಯನ್ನು ಈ ಗೋಡೆಗಳ ಇಟ್ಟಿಗೆಗಳ ಮೇಲೆ ಕೆತ್ತಿ ಗೌರವಿಸಲಾಗುತ್ತದೆ. ಈಗ ಆಪರೇಷನ್ ಸಿಂದೂರನ ಈ ಆರು ಜನ ವೀರ ಯೋಧರ ಹೆಸರುಗಳು ಸಹ ಈ ಸ್ಮಾರಕದ ಶಾಶ್ವತ ಭಾಗವಾಗಲಿವೆ. ಏನಿದು ಆಪರೇಷನ್ ಸಿಂದೂರ? ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 26 ಅಮಾಯಕರು ಜೀವ ಕಳೆದುಕೊಂಡಿದ್ದರು. ಈ ರಕ್ತಪಾತಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯು ಕಳೆದ ವರ್ಷ ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಭಯೋತ್ಪಾದಕರ ತರಬೇತಿ ಶಿಬಿರಗಳ ಮೇಲೆ ಭಾರಿ ದಾಳಿ ನಡೆಸಿತ್ತು. ಇದಕ್ಕೆ ಪಾಕಿಸ್ತಾನ ಕೂಡ ತಕ್ಷಣವೇ ತಿರುಗೇಟು ನೀಡಲು ಯತ್ನಿಸಿದಾಗ, ಗಡಿಯಲ್ಲಿ ವೈಮಾನಿಕ ಕದನ, ಡ್ರೋನ್ ದಾಳಿಗಳು ಮತ್ತು ಭಾರಿ ಪ್ರಮಾಣದ ಫಿರಂಗಿ ಗುಂಡಿನ ಚಕಮಕಿ ನಡೆದಿತ್ತು. ಈ ಇಡೀ ಮಿಲಿಟರಿ ಕಾರ್ಯಾಚರಣೆಗೆ ಭಾರತೀಯ ಸೇನೆ 'ಆಪರೇಷನ್ ಸಿಂದೂರ' ಎಂದು ಹೆಸರಿಟ್ಟಿತ್ತು.


Udayavani 1 hour ago
Home Flash News