Select Location
All Locations
State
Region
City / District
ರಾಜ್ಯದಲ್ಲಿ 7,925 ಪೊಲೀಸ್ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪ್ರಿಯಾಂಕ್ ಖರ್ಗೆ

ರಾಜ್ಯದಲ್ಲಿ 7,925 ಪೊಲೀಸ್ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2026-27ನೇ ಸಾಲಿನಲ್ಲಿ 7,925 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಒಟ್ಟು ಹುದ್ದೆಗಳ ಪೈಕಿ 1,639 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿರಿಸಲಾಗಿದ್ದು, ಉಳಿದ ಹುದ್ದೆಗಳು ರಾಜ್ಯದ ಇತರೆ ಭಾಗಗಳಿಗೆ ಮೀಸಲಾಗಿದೆ. ಈ ನೇಮಕಾತಿಯಲ್ಲಿ ಡಿಟೆಕ್ಟಿವ್ ಸಬ್‌-ಇನ್‌ಸ್ಪೆಕ್ಟರ್, ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್, ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್, ವಿಶೇಷ ಮೀಸಲು ಪೊಲೀಸ್ (ಸಿಎಆರ್) ಕಾನ್‌ಸ್ಟೆಬಲ್, ವಿಶೇಷ ಮೀಸಲು ಪೊಲೀಸ್ (ನಾಗರಿಕ) ಕಾನ್‌ಸ್ಟೆಬಲ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಒಳಗೊಂಡಿವೆ.

ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು. ನಾಗರಿಕ ಹಾಗೂ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

ಇದೇ ವೇಳೆ, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 10 ಹೊಸ ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ, ವಿವಿಧ ಪ್ರದೇಶಗಳಲ್ಲಿ ಸ್ವಂತ ಕಟ್ಟಡವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆಗಳಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಯೋಜನೆಗಾಗಿ ಸಚಿವ ಸಂಪುಟ 30 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಉಪ್ಪಿನಂಗಡಿ, ಕುಂದಗೋಳ, ಅರಸೀಕೆರೆ ಗ್ರಾಮಾಂತರ, ಸುರಪುರ, ಮುದ್ದೇಬಿಹಾಳ, ಕುಷ್ಟಗಿ, ಸಿರವಾರ, ಸಕಲೇಶಪುರ ಗ್ರಾಮಾಂತರ, ಬಸವನ ಬಾಗೇವಾಡಿ ಹಾಗೂ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗಳಿಗೆ ಆಧುನಿಕ ಕಟ್ಟಡಗಳನ್ನು ನಿರ್ಮಿಸಲಾಗುವುದು. ಈ ಹೊಸ ಕಟ್ಟಡಗಳ ನಿರ್ಮಾಣದಿಂದ ಪೊಲೀಸ್ ಸಿಬ್ಬಂದಿಗೆ ಉತ್ತಮ ಕಾರ್ಯನಿರ್ವಹಣೆಯ ವಾತಾವರಣ ದೊರೆಯಲಿದ್ದು, ಸಾರ್ವಜನಿಕರಿಗೆ ಇನ್ನಷ್ಟು ವೇಗವಾಗಿ ಹಾಗೂ ಸುಲಭವಾಗಿ ಪೊಲೀಸ್ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ರಾಜ್ಯದ ಬೆಳೆಯುತ್ತಿರುವ ಭದ್ರತಾ ಸವಾಲುಗಳನ್ನು ಎದುರಿಸಲು ಪೊಲೀಸ್ ಇಲಾಖೆಯ ಮೂಲಸೌಕರ್ಯವನ್ನು ಆಧುನೀಕರಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು. ತಂತ್ರಜ್ಞಾನ ಮತ್ತು ಮೂಲಸೌಕರ್ಯ ಎರಡರಲ್ಲೂ ಪೊಲೀಸ್ ಇಲಾಖೆಯನ್ನು ನಿರಂತರವಾಗಿ ಬಲಪಡಿಸುವ ಕೆಲಸವನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.


Kannadapraba 1 hour ago
Home Flash News