Shivamogga: ಗಾಜನೂರು ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನದಿಗೆ
ಶಿವಮೊಗ್ಗ: ಆರಿದ್ರಾ ಮಳೆ ಕೊಂಚ ಭರವಸೆ ಮೂಡಿಸಿದ್ದು, ತುಂಗಾ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಇದರಿಂದ ರಾಜ್ಯದ ಅತಿಚಿಕ್ಕ ಜಲಾಶಯಗಳಲ್ಲಿ ಒಂದಾಗಿರುವ ಗಾಜನೂರಿನ ಚಿಕ್ಕ ಜಲಾಶಯ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ. 10 ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಆಗಿದ್ದು, ಪ್ರಸ್ತುತ ನೀರಿನ ಮಟ್ಟ 588.18 ಮೀಟರ್ ತಲುಪಿದೆ. ಜಲಾಶಯವು ಭರ್ತಿಯಾಗಿದೆ. ಒಟ್ಟು 3.24 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 3.206 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 587.54 ಮೀಟರ್ ಇತ್ತು ಹಾಗೂ ಒಳಹರಿವು 46,042 ಕ್ಯೂಸೆಕ್ ಮತ್ತು ಹೊರಹರಿವು 38,345 ಕ್ಯೂಸೆಕ್‌ನಷ್ಟಿತ್ತು. ತುಂಗಾ ನದಿಯಲ್ಲಿ ನೀರು ಹೆಚ್ಚಾದ್ದರಿಂದ ರೈತರಲ್ಲಿ ಸಂತಸ ಮೂಡಿಸಿದೆ.