ಶರಣ ಸಾಹಿತ್ಯ ಪರಿಷತ್ ದತ್ತಿ ಉಪನ್ಯಾಸ: ಶರಣರ ನಡೆ-ನುಡಿ ಸಮಾಜಕ್ಕೆ ಆದರ್ಶ
ತಿಪಟೂರು: ಶರಣ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಿ ಸರಳ ಕನ್ನಡದಲ್ಲಿ ವಚನಗಳನ್ನು ರಚಿಸಿ, ನಡೆ-ನುಡಿ ಮೂಲಕ ಸಮಾಜಕ್ಕೆ ಆದರ್ಶವಾಗಿ ಬದುಕಿದವರು ಶರಣರು ಎಂದು ನಿವೃತ್ತ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಅಭಿಪ್ರಾಯಪಟ್ಟರು. ನಗರದ ಎಸ್.ವಿ.ಪಿ. ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ದಿ. ಸತೀಶ್‌ಕುಮಾರ್ ಸಂಸ್ಮರಣ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು. ತಾಲ್ಲೂಕಿನ ಶರಣ ಸಾಹಿತ್ಯ ಪರಿಷತ್ ಶರಣ ಸಂಸ್ಕೃತಿಯ ಪ್ರಸಾರದಲ್ಲಿ ದತ್ತಿ ಉಪನ್ಯಾಸಗಳು, ವಚನಗಾಯನ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರತಿಯೊಬ್ಬರು ಶರಣರ ಹಾದಿಯಲ್ಲಿ ನಡೆಯಬೇಕು ಎಂದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಆರ್. ಗುರುಸ್ವಾಮಿ ಮಾತನಾಡಿ ‘ಪರಿಷತ್ತಿನಿಂದ ಇದುವರೆಗೆ 23 ದತ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶರಣ ಸಂಸ್ಕೃತಿ ಪ್ರಸಾರದಲ್ಲಿ ತಾಲ್ಲೂಕು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ’ ಎಂದು ಹೇಳಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ವಚನ ಗಾಯಕರನ್ನು ಸತ್ಕರಿಸಲಾಯಿತು. ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ, ಜಗದೀಶ್, ಶಿವಗಂಗಪ್ಪ ಮಾತನಾಡಿದರು. ಸೋಮಶೇಖರ್, ಕಾತ್ಯಾಯಿನಿ, ಅರ್ಕಾಚಾರ್, ಎಚ್.ಎಸ್. ಮಂಜಪ್ಪ, ಜುಂಜಪ್ಪ, ಸೋಮಶೇಖರ್, ವಿಜಯಕುಮಾರಿ ಉಪಸ್ಥಿತರಿದ್ದರು. ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು.