Select Location
All Locations
State
Region
City / District
Commonwealth Games 2026: ಕಣ್ಣೀರಿನ ಕಡಲು ದಾಟಿ ಚಿನ್ನದ ಕಿರೀಟ ತೊಟ್ಟ ಶರ್ಮಿಳಾ

Commonwealth Games 2026: ಕಣ್ಣೀರಿನ ಕಡಲು ದಾಟಿ ಚಿನ್ನದ ಕಿರೀಟ ತೊಟ್ಟ ಶರ್ಮಿಳಾ

ಗ್ಲಾಸ್ಗೊ: ಭಾರತೀಯ ಕ್ರೀಡಾಲೋಕದಲ್ಲಿ ಬಡತನ, ಸಮಾಜದ ತಾರತಮ್ಯಗಳನ್ನು ಮೆಟ್ಟಿ ನಿಂತು ಗೆದ್ದ ಹಲವು ಕಥೆಗಳಿವೆ. ಆದರೆ, ಪ್ಯಾರಾ-ಅಥ್ಲೀಟ್‌ಗಳು ಅದರಲ್ಲಿಯೂ ಮಹಿಳೆಯರು ಅನುಭವಿಸುವ ನರಕಯಾತನೆ ಹೇಳತೀರದು. ಅಂತಹ ಕಷ್ಟಗಳ‌ಲ್ಲಿ ಬೆಂದು, ಇಂದು ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ ಶರ್ಮಿಳಾ ಧನಕರ್.

40 ವರ್ಷದ ಶರ್ಮಿಳಾ, ಕಾಮನ್‌ವೆಲ್ತ್ ಗೇಮ್ಸ್‌ನ 'ಮಹಿಳೆಯರ ಶಾಟ್‌ಪಟ್ F57' ವಿಭಾಗದಲ್ಲಿ 9.81 ಮೀಟರ್ ದೂರ ಎಸೆಯುವ ಮೂಲಕ ದೇಶಕ್ಕೆ ಚಾರಿತ್ರಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪ್ಯಾರಾ-ಅಥ್ಲೀಟ್ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಪದಕ ಗೆದ್ದ ಕ್ಷಣ ಶರ್ಮಿಳಾ ಕಣ್ಣಿನಿಂದ ಹರಿದ ಕಣ್ಣೀರು, ಅನುಭವಿಸಿದ ನೋವು, ಗಂಡನಿಂದ ದೌರ್ಜನ್ಯ ಮತ್ತು ಅಪಮಾನಗಳನ್ನೆಲ್ಲ ತೊಳೆದುಹಾಕಿದಂತಿತ್ತು.

ಶಾಟ್‌ಪಟ್ ವಿಭಾಗದಲ್ಲಿ 9.81 ಮೀಟರ್‌ ಎಸೆಯುವ ಮೂಲಕ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಎರಡನೇ ಸ್ಥಾನದಲ್ಲಿದ್ದ ನೈಜೀರಿಯಾದ ಯುಚೇರಿಯಾ ಇಯಿಯಾಜಿ ಫೌಲ್‌ನಿಂದಾಗಿ ಅನರ್ಹಗೊಂಡಿದ್ದರಿಂದ, ಶಾಟ್‌ಪಟ್ ವಿಭಾಗದಲ್ಲಿ 7.26 ಮೀಟರ್‌ ಎಸೆದಿದ್ದ ಭಾರತದ ಇನ್ನೊಬ್ಬ ಕ್ರೀಡಾಪಟು ಶಿಲ್ಪಾ ಶೈಲಾ ಅವರಿಗೆ ತಾಮ್ರದ ಪದಕ (ಬ್ರಾಂಜ್) ಲಭಿಸಿತು. 4 ವರ್ಷಗಳ ಹಿಂದೆ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶರ್ಮಿಳಾ 4ನೇ ಸ್ಥಾನ ಪಡೆದು ಪದಕ ಕೈತಪ್ಪಿಸಿಕೊಂಡಿದ್ದರು. ಆದರೆ ಈ ಬಾರಿ ಅವರಿಗೆ ಯಾವುದೇ ನಿರಾಸೆ ಎದುರಾಗಲಿಲ್ಲ. ನರಕಸದೃಶ ಜೀವನದಿಂದ ನಕ್ಷತ್ರದಂತೆ ಹೊಳೆದ ಶರ್ಮಿಳಾ ಹರಿಯಾಣದ ಛಿತ್ರೋಲಿ ಗ್ರಾಮದ ಬಡ ರೈತನ ಮಗಳಾಗಿ ಹುಟ್ಟಿದ ಶರ್ಮಿಳಾ ಅವರಿಗೆ ಬಾಲ್ಯದಲ್ಲೇ ಪೋಲಿಯೊ ಬಾಧಿಸಿತ್ತು. ತಾಯಿ ಕಣ್ಣು ಕಾಣದ ಅಂಧೆ. 19ನೇ ವಯಸ್ಸಿನಲ್ಲಿ ಮದುವೆಯಾದಾಗ ಪತಿ ಕ್ರೂರಿಯಾಗಿದ್ದ. ಆತನ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ನಲುಗಿದ ಶರ್ಮಿಳಾ, ಒಂದು ರಾತ್ರಿ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರಬಂದರು. 26ನೇ ವಯಸ್ಸಿನಲ್ಲಿ ಹತಾಶೆಯಲ್ಲಿದ್ದ ಅವರಿಗೆ ಆತ್ಮಹತ್ಯೆಯ ಆಲೋಚನೆಗಳು ಕಾಡುತ್ತಿದ್ದವು. ನಂತರ ಅಜಿತ್ ಸಿಂಗ್ ಎಂಬುವವರೊಂದಿಗೆ ಎರಡನೇ ಮದುವೆಯಾಯಿತು. ಅಜಿತ್‌ ಅವರ ಪ್ರೋತ್ಸಾಹದಿಂದಾಗಿ ಶರ್ಮಿಳಾ ಕ್ರೀಡಾಲೋಕಕ್ಕೆ ಕಾಲಿಟ್ಟರು. ಕೋಚ್‌ಗಳಾದ ಟೇಕ್ ಚಂದ್ ಮತ್ತು ದೇವೇಂದ್ರ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು, 2021ರ ರಾಷ್ಟ್ರೀಯ ಪ್ಯಾರಾ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು.


Prajavani 3 days ago
Home Flash News