"ಇನ್ನು ಹೋರಾಡಲು ಇಷ್ಟವಿಲ್ಲ": ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನೇಮಾರ್ ವಿದಾಯ
ಬ್ರಝಿಲ್ ರಾಷ್ಟ್ರೀಯ ಫುಟ್‌ಬಾಲ್ ತಂಡದ ಸಾರ್ವಕಾಲಿಕ ಗರಿಷ್ಠ ಗೋಲ್ ಸರದಾರ, 34 ವರ್ಷದ ತಾರೆ ನೇಮಾರ್ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುವ ಮೂಲಕ ತಮ್ಮ 16 ವರ್ಷಗಳ ಸುದೀರ್ಘ ಪ್ರಯಾಣಕ್ಕೆ ತೆರೆ ಎಳೆದಿದ್ದಾರೆ. 2026ರ ಫಿಫಾ ವಿಶ್ವಕಪ್‌ನ ರೌಂಡ್ ಆಫ್ 16 ಹಂತದಲ್ಲಿ ನಾರ್ವೆ ವಿರುದ್ಧ ಸೋತು ಬ್ರಝಿಲ್ ಹೊರಬಿದ್ದ ನಂತರ ನೇಮಾರ್ ನಿವೃತ್ತಿಯ ಕುರಿತು ವದಂತಿಗಳು ದಟ್ಟವಾಗಿದ್ದವು. ಕೋಪಾ ಸುಡಾಮೆರಿಕಾನಾ ಟೂರ್ನಿಯಲ್ಲಿ ತಮ್ಮ ಸ್ಯಾಂಟೋಸ್ ಕ್ಲಬ್ ವೆನೆಜುವೆಲಾದ ಯೂನಿವರ್ಸಿಟಿ ಸೆಂಟ್ರಲ್ ವಿರುದ್ಧ 4-2 ಅಂತರದ ಜಯ ಸಾಧಿಸಿದ ಬಳಿಕ ಅವರು ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ.
ತಮ್ಮ ಸುದೀರ್ಘ ವೃತ್ತಿಜೀವನದ ಕುರಿತು ಮಾತನಾಡಿದ ನೇಮಾರ್, "ರಾಷ್ಟ್ರೀಯ ತಂಡದೊಂದಿಗಿನ ನನ್ನ ಪಯಣ ಮುಗಿದಿದೆ. ನಾನು ಇತಿಹಾಸ ನಿರ್ಮಿಸಿದ್ದೇನೆ, ಹಳದಿ ಜೆರ್ಸಿಗಾಗಿ ನನ್ನ ರಕ್ತ ಮತ್ತು ಜೀವವನ್ನು ನೀಡಿ ಸದಾ ಹೋರಾಡಿದ್ದೇನೆ. ಆದರೆ ಈಗ ನನಗೆ ಇನ್ನು ಮುಂದೆ ಹೋರಾಡಲು ಇಷ್ಟವಿಲ್ಲ," ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. ಬ್ರೆಜಿಲ್ ಪರ ಗರಿಷ್ಠ ಗೋಲು ಬಾರಿಸಿದ ದಾಖಲೆ ಹೊಂದಿರುವ ನೇಮಾರ್ ವಿಶ್ವಕಪ್, ಕೋಪಾ ಅಮೆರಿಕ ಮತ್ತು ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದು, ಇನ್ಮುಂದೆ ತಮ್ಮ ಸಂಪೂರ್ಣ ಗಮನವನ್ನು ಸ್ಯಾಂಟೋಸ್ ಕ್ಲಬ್ ಮೇಲಷ್ಟೇ ಕೇಂದ್ರೀಕರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ, ಇತ್ತೀಚಿನ ಪಂದ್ಯದ ನಂತರ ಯುವ ಆಟಗಾರರನ್ನು ನಿಂದಿಸಿದ್ದಾರೆ ಎಂಬ ಆರೋಪಗಳನ್ನು ನೇಮಾರ್ ತೀವ್ರವಾಗಿ ನಿರಾಕರಿಸಿದ್ದಾರೆ. ತಂಡದ ಪ್ರದರ್ಶನ ಸುಧಾರಿಸಲು ನಾಯಕನಾಗಿ ತಾವು ಮಾತನಾಡಿದ್ದಾಗಿ ಸ್ಪಷ್ಟಪಡಿಸಿದ ಅವರು, "ಇಂತಹ ಸುಳ್ಳು ಸುದ್ದಿಗಳು ಹರಡುವುದು ಕಿರಿಕಿರಿಯುಂಟು ಮಾಡುತ್ತದೆ. ದುಬಾರಿ ತಪ್ಪುಗಳನ್ನು ತಪ್ಪಿಸುವಂತೆ ತಂಡವನ್ನು ಒತ್ತಾಯಿಸಿದ್ದೇನಷ್ಟೇ. ನೀವು ಸುಲಭವಾಗಿ ಡ್ರಾ ಬಿಟ್ಟುಕೊಡಲು ಸಾಧ್ಯವಿಲ್ಲ.ನಾವು ಅಷ್ಟು ನಿರ್ಲಕ್ಷ್ಯ ವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನಾಯಕನಾಗಿ, ನನಗೆ ಹಾಗೆ ಹೇಳಲು ಎಲ್ಲ ಹಕ್ಕಿದೆ. ಲೂಕಾಸ್ ವೆರಿಸಿಮೊ ಮತ್ತು ಗೇಬ್ರಿಯಲ್ ಬಾರ್ಬೋಸಾ ಅವರೂ ಆಟಗಾರರೊಂದಿಗೆ ಮಾತನಾಡಿದ್ದಾರೆ" ಎಂದು ವಿವರಿಸಿದ್ದಾರೆ. ಸ್ಯಾಂಟೋಸ್ ತಂಡವು ಮುಂದಿನ ಸುತ್ತಿನಲ್ಲಿ ಈಕ್ವೆಡಾರ್‌ನ ಮಕಾರಾ ತಂಡವನ್ನು ಎದುರಿಸಲಿದೆ.