ವಂದೇ ಮಾತರಂ ಅವಮಾನಿಸುವುದು ಶಿಕ್ಷಾರ್ಹ ಅಪರಾಧ: ಲೋಕಸಭೆಯಲ್ಲಿ ಮಸೂದೆ ಅಸ್ತು
ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಮಸೂದೆಯನ್ನು ವ್ಯಾಪಕ ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಗುರುವಾರ ಅಂಗೀಕಾರಗೊಂಡಿದೆ. ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ, 2026’ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡಿತು. ಹೊಸ ಮಸೂದೆ ಪ್ರಕಾರ, ರಾಷ್ಟ್ರಗೀತೆ ‘ಜನಗಣಮನ’ದ ಸ್ಥಾನಮಾನವೇ ವಂದೇಮಾತಂರಂಗೂ ಸಿಗಲಿದೆ. ‘ವಂದೇ ಮಾತರಂ’ಗೆ ಮಾಡುವ ಯಾವುದೇ ಅವಮಾನವನ್ನು ಕ್ರಿಮಿನಲ್ ಅಪರಾಧವಾಗಿದೆ. ಮಸೂದೆ ಕುರಿತಂತೆ ಕೆಳಮನೆ (ಲೋಕಸಭೆ)ಯಲ್ಲಿ ನಡೆದ ಸಂಕ್ಷಿಪ್ತ ಚರ್ಚೆಯಲ್ಲಿ ಇಬ್ಬರು ಸಂಸದರು ಮಾತ್ರ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ‘76 ವರ್ಷಗಳ ಆಳ್ವಿಕೆಯಲ್ಲಿ ಕಾಂಗ್ರೆಸ್ ಪಕ್ಷವು ವಂದೇ ಮಾತರಂಗೆ ಸೂಕ್ತ ಗೌರವ ನೀಡಬೇಕಿತ್ತು. ಆದರೆ ತುಷ್ಟೀಕರಣ ರಾಜಕಾರಣವನ್ನು ಆಶ್ರಯಿಸಿತು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಾಷ್ಟ್ರೀಯ ಗೀತೆಯ ಸ್ಥಾನಮಾನ ನೀಡಿದ್ದು, ಅದಕ್ಕೆ ಅರ್ಹವಾದ ಗೌರವ ಸಂದಿದೆ’ ಎಂದು ತಿಳಿಸಿದ್ದಾರೆ. ‘ಏಕ ಭಾರತ– ಶ್ರೇಷ್ಠ ಭಾರತ‘ ಎಂದು ಉಲ್ಲೇಖಿಸಿದ ಅವರು, ವಂದೇ ಮಾತರಂನ ಆರು ಚರಣವನ್ನು ಪೂರ್ತಿಯಾಗಿ ಹಾಡಬೇಕು’ ಎಂದು ಈ ವೇಳೆ ಪ್ರತಿಪಾದಿಸಿದರು.
ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ ಅನ್ವಯ, ವಂದೇ ಮಾತರಂ ಹಾಡುವ ವೇಳೆ ಅವಮಾನವೆಸಗಿದರೆ, ಮೂರು ವರ್ಷ ಜೈಲು ಹಾಗೂ ದಂಡ ವಿಧಿಸಲು ಅವಕಾಶ ಇರಲಿದೆ. ಎರಡನೇ ಸಲ ತಪ್ಪು ಪುನಾರವರ್ತನೆಯಾದರೆ, ಒಂದು ವರ್ಷದವರೆಗೂ ಶಿಕ್ಷೆ ವಿಧಿಸಬಹುದಾಗಿದೆ. ಇಬ್ಬರು ಸಂಸದರು ಮಾತನಾಡಿದ ಬಳಿಕ ಧ್ವನಿಮತದ ಮೂಲಕ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತರು. ವಿರೋಧಪಕ್ಷಗಳು ತಂದ ತಿದ್ದುಪಡಿಯನ್ನು ತಿರಸ್ಕರಿಸಲಾಯಿತು. ಈ ವೇಳೆ ಸಿಟ್ಟಿಗೆದ್ದ ಡಿಎಂಕೆ ಪಕ್ಷದ ಎ.ರಾಜಾ, ಮಸೂದೆಗೆ ಸಂಬಂಧಿಸಿದ ದಾಖಲೆಗಳನ್ನು ಹರಿದು, ಸದನದ ಮುಂಭಾಗಕ್ಕೆ ಎಸೆದರು. ‘ರಾಷ್ಟ್ರೀಯತೆಯ ವೇಷದ ಮೇಲೆ ಹಿಂದುತ್ವ ಅಜೆಂಡಾವನ್ನು ಜಾರಿಗೆ ತರಲಾಗಿದೆ. ಈ ಮಸೂದೆಯನ್ನು ಪಕ್ಷವು ಬಲವಾಗಿ ವಿರೋಧಿಸುತ್ತದೆ’ ಎಂದು ಡಿಎಂಕೆ ಸಂಸದ ಕನಿಮೋಳಿ ಆಕ್ಷೇಪ ವ್ಯಕ್ತಪಡಿಸಿದರು.