Select Location
All Locations
State
Region
City / District
'ಕಾವೇರಿ’ಗಾಗಿ ಪಕ್ಷ ಭೇದ ಮರೆತು ಒಗ್ಗಟ್ಟು: ಸರ್ಕಾರಕ್ಕೆ ವಿರೋಧ ಪಕ್ಷಗಳ ಎಚ್ಚರಿಕೆ

'ಕಾವೇರಿ’ಗಾಗಿ ಪಕ್ಷ ಭೇದ ಮರೆತು ಒಗ್ಗಟ್ಟು: ಸರ್ಕಾರಕ್ಕೆ ವಿರೋಧ ಪಕ್ಷಗಳ ಎಚ್ಚರಿಕೆ

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಹಿತಕ್ಕಾಗಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ನೀಡುವುದಾಗಿ ಹೇಳಿರುವ ವಿರೋಧ ಪಕ್ಷಗಳ ನಾಯಕರು, ಸರ್ವ ಪಕ್ಷಗಳ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.

‘ಸಂಕಷ್ಟ ಪರಿಹಾರ ಸೂತ್ರ ಆಗಲೇಬೇಕು’ ‘ಸಂಕಷ್ಟ ಪರಿಹಾರ ಸೂತ್ರ ಆಗಲೇಬೇಕು. ಇಲ್ಲದಿದ್ದರೆ ರಾಜ್ಯ ಮತ್ತು ರಾಜ್ಯದ ರೈತರ ಹಿತ ಕಾಯುವುದು ಕಷ್ಟ. ಆಗ ಸರ್ಕಾರ ಸಂಕಷ್ಟಕ್ಕೆ ಗುರಿ ಆಗಬೇಕಾಗುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಇದು ಭಾವನಾತ್ಮಕ ವಿಚಾರ. ಆದ್ದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ರೈತರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯ. ಕೇಂದ್ರ ಸರ್ಕಾರ ಅಥವಾ ಸುಪ್ರೀಂ ಕೋರ್ಟ್‌ ಸಂಕಷ್ಟ ಪರಿಹಾರ ಸೂತ್ರ ರಚನೆ ಮಾಡುವುದು ಅಗತ್ಯ. ಕೊರತೆ ಸಂದರ್ಭದಲ್ಲಿ ನೀರನ್ನು ನಾಲ್ಕು ರಾಜ್ಯಗಳು ಯಾವ ರೀತಿ ಹಂಚಿಕೊಳ್ಳಬೇಕೆಂಬ ಸೂತ್ರ ಅಗತ್ಯ’ ಎಂದು ಅವರು ಪ್ರತಿಪಾದಿಸಿದರು. ‘ಸಂಕಷ್ಟ ಪರಿಹಾರ ಸೂತ್ರಕ್ಕೆ ನಾವು ಒತ್ತಾಯಿಸಬೇಕು. ಬೆಳೆಗಳಿಗೆ ನೀರು ಹರಿಸುವುದಿಲ್ಲ ಎಂದಿರುವ ಕಾರಣ ರೈತರಿಗೆ ಪರಿಹಾರ ವಿತರಿಸಬೇಕಿದೆ. ಕಬಿನಿ, ಹಾರಂಗಿ ಜಲಾಶಯ ತುಂಬಿರುವುದರಿಂದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಆದ್ದರಿಂದ ರೈತರ ಬೆಳೆಗಳಿಗೆ ಕೂಡಲೇ ನೀರು ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಈ ವಿವಾದ ಆಗಾಗ ಎದುರಾಗುವುದರಿಂದ ಸರ್ಕಾರಕ್ಕೆ ತಲೆನೋವು ತಪ್ಪಿದ್ದಲ್ಲ. ಹೀಗಾಗಿ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಸೂತ್ರ ಬೇಕಿದೆ’ ಎಂದರು.

‘ಮಳೆ ನಮ್ಮ ರಕ್ಷಣೆಗೆ ಬಂದಿದೆ ನಿಜ. ಹಾಗಂತ ಮುಂದಿನ ದಿನಗಳಲ್ಲಿ ನಾವು ಎಚ್ಚರ ತಪ್ಪುವುದು ಬೇಡ. ಕುಡಿಯುವ ನೀರಿನ ಉದ್ದೇಶದ ಜತೆಗೆ ರೈತರಿಗೆ ನೀರು ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸದ್ಯಕ್ಕೆ ಮಳೆ ಬಂತು ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆವು ಎನ್ನುವ ವರ್ತನೆ ಬೇಡ’ ಎಂದು ಸಲಹೆ ನೀಡಿದರು. ‘ಸರ್ಕಾರ ಬಹಳ ಹಿಂದೆಯೇ ಎಚ್ಚರಿಕೆ ವಹಿಸಬೇಕಿತ್ತು. ಕುಡಿಯುವ ಉದ್ದೇಶಕ್ಕೆ ನೀರು ಬೇಕು, ಬೆಳೆಗಳಿಗೆ ಬಿಡುವುದಿಲ್ಲ ಎನ್ನುವ ನಿರ್ಧಾರದಿಂದ ರೈತರಿಗೆ ಬೆಳೆ ನಷ್ಟವಾಗಿದೆ. ಕಾವೇರಿ ಸೇರಿ ತುಂಗಭದ್ರಾ ವ್ಯಾಪ್ತಿಯಲ್ಲಿ ಕೂಡ ಭತ್ತ ಬೆಳೆಯಬೇಡಿ ಎಂದು ಆದೇಶ ಹೊರಡಿಸಲಾಗಿತ್ತು. ಪರಿಣಾಮ ಹಾಲಿ ಇದ್ದ ಬೆಳೆ ನಾಶವಾಗಿದೆ. ಇನ್ನು ಈಗ ಮಳೆ ಬಂದರೂ ಭತ್ತದ ಸಸಿ ಬೆಳೆಯದ ಕಾರಣಕ್ಕೆ ನಾಟಿ ಮಾಡಲು ಆಗುತ್ತಿಲ್ಲ. ಸರ್ಕಾರ ಸರಿಯಾಗಿ ಅಂದಾಜು ಮಾಡುವಲ್ಲಿ ವಿಫಲವಾದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ಹೇಳಿದರು.


Prajavani 1 hour ago
Home Flash News