Select Location
All Locations
State
Region
City / District
ಮರಣದಂಡನೆ: ಗಲ್ಲು ಶಿಕ್ಷೆ ಬದಲು ನೋವುರಹಿತ ಪರ್ಯಾಯ ವಿಧಾನಕ್ಕೆ ಸುಪ್ರೀಂ ಕೋರ್ಟ್ ನಕಾರ

ಮರಣದಂಡನೆ: ಗಲ್ಲು ಶಿಕ್ಷೆ ಬದಲು ನೋವುರಹಿತ ಪರ್ಯಾಯ ವಿಧಾನಕ್ಕೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಮರಣದಂಡನೆ ಜಾರಿಗೊಳಿಸುವ ಸಂದರ್ಭದಲ್ಲಿ ಗಲ್ಲಿಗೇರಿಸುವ ಪದ್ಧತಿಯನ್ನು ರದ್ದುಪಡಿಸಿ, ಕಡಿಮೆ ನೋವುಂಟು ಮಾಡುವ ಪರ್ಯಾಯ ವಿಧಾನವನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ. ಆದರೆ, ಭವಿಷ್ಯದಲ್ಲಿ ಹೊಸ ವೈಜ್ಞಾನಿಕ, ವೈದ್ಯಕೀಯ ಅಥವಾ ಪ್ರಾಯೋಗಿಕ ಸಾಕ್ಷ್ಯಗಳು ಲಭ್ಯವಾದರೆ, ಈ ವಿಚಾರವನ್ನು ಮರುಪರಿಶೀಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಈ ತೀರ್ಪು ನೀಡಿದೆ. ಮರಣದಂಡನೆಯನ್ನು ಗಲ್ಲಿಗೇರಿಸುವ ಮೂಲಕ ಜಾರಿಗೊಳಿಸುವುದಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 354(5) ಹಾಗೂ ಅದಕ್ಕೆ ಸಮಾನವಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ನಿಯಮಗಳ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಲಾಗಿತ್ತು. ಇದನ್ನೂ ಓದಿ: ‘ಅಲ್ಲಿ ಪ್ರತಿ ಮತದಾರನಿಗೂ photo ID ಇದೆ’: ಭಾರತದ ಚುನಾವಣಾ ವ್ಯವಸ್ಥೆ ಬಣ್ಣಿಸಿದ ಟ್ರಂಪ್‌

ಹಿರಿಯ ವಕೀಲ ರಿಷಿ ಮಲ್ಹೋತ್ರಾ ಅವರು 2017ರಲ್ಲಿ ಈ ಅರ್ಜಿ ಸಲ್ಲಿಸಿದ್ದರು. ಗಲ್ಲಿಗೇರಿಸುವುದು ಕ್ರೂರ ಹಾಗೂ ಅಮಾನವೀಯ ವಿಧಾನವಾಗಿದ್ದು, ಮರಣದಂಡನೆ ಜಾರಿಗೆ ಹೆಚ್ಚು ಮಾನವೀಯ ಹಾಗೂ ಕಡಿಮೆ ನೋವುಂಟು ಮಾಡುವ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ವಾದಿಸಿದ್ದರು. ಮಾರಕ ಇಂಜೆಕ್ಷನ್ ಸೇರಿದಂತೆ ಪರ್ಯಾಯ ವಿಧಾನಗಳನ್ನು ಪರಿಗಣಿಸುವಂತೆ ಮನವಿ ಮಾಡಲಾಗಿತ್ತು.

ಅರ್ಜಿಯನ್ನು ವಜಾಗೊಳಿಸಿದರೂ, ಇದೇ ವಿಚಾರಕ್ಕೆ ಮುಂದೆ ನ್ಯಾಯಾಲಯದ ಬಾಗಿಲು ಸಂಪೂರ್ಣ ಮುಚ್ಚಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗಲ್ಲಿಗೇರಿಸುವ ವಿಧಾನಕ್ಕೆ ಸಂಬಂಧಿಸಿದ ಹಿಂದಿನ ತೀರ್ಪಿನ ವೈಜ್ಞಾನಿಕ ಅಥವಾ ವೈದ್ಯಕೀಯ ಆಧಾರವನ್ನು ಬದಲಿಸುವಂತಹ ಪ್ರಬಲ ಸಾಕ್ಷ್ಯಗಳು ಭವಿಷ್ಯದಲ್ಲಿ ದೊರೆತರೆ, ಅದರ ಸಾಂವಿಧಾನಿಕ ಮಾನ್ಯತೆಯನ್ನು ಮತ್ತೊಮ್ಮೆ ಪರಿಶೀಲಿಸಬಹುದು ಎಂದು ಪೀಠ ತಿಳಿಸಿದೆ.


Prajavani 1 hour ago
Home Flash News