ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸಿಂಧು, ಲಕ್ಷ್ಯಗೆ ಸೋಲು
ನವದೆಹಲಿ (ಪಿಟಿಐ): ಪದಕದ ನಿರೀಕ್ಷೆಯಲ್ಲಿದ್ದ ಪಿ.ವಿ.ಸಿಂಧು ಮತ್ತು ಆಯುಷ್ ಶೆಟ್ಟಿ ಅವರು ಪ್ರಿಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಸೋಲನುಭವಿಸುವುದರೊಂದಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಗುರುವಾರ ದೊಡ್ಡ ಆಘಾತ ಅನುಭವಿಸಿತು. ಇವರಿಬ್ಬರ ಸೋಲಿನೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿರುವ ಸಿಂಧು ಇಲ್ಲಿ ಆರನೇ ಪದಕ ಗೆಲ್ಲುವ ಆಸೆಯಲ್ಲಿದ್ದರು. ಆದರೆ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರರುವ ಚೀನಾದ ವಾಂಗ್ ಝಿ ಯಿ ಅವರು ಮೂರು ಗೇಮ್‌ಗಳ ಕಠಿಣ ಹಣಾಹಣಿಯಲ್ಲಿ ಭಾರತದ ಆಟಗಾರ್ತಿಯನ್ನು 21–11, 15–21, 21–17 ರಿಂದ ಸೋಲಿಸಿ ಎಂಟರ ಘಟ್ಟಕ್ಕೆ ಲಗ್ಗೆಹಾಕಿದರು. ಪಂದ್ಯದ ವೇಳೆ ಕೆಲವು ಬಾರಿ ಎರಡೂ ಕಾಲುಗಳ ಸ್ನಾಯು ಸೆಳೆತಕ್ಕೆ ಒಳಗಾದರೂ ಝಿ ಗುರಿಯಿಂದ ವಿಚಲಿತರಾಗಲಿಲ್ಲ.
ಇದು ಭಾರತದ ಆಟಗಾರ್ತಿಗೆ 11ನೇ ವಿಶ್ವ ಚಾಂಪಿಯನ್‌ಷಿಪ್ ಆಗಿತ್ತು. ಈ ಹಿಂದೆ ಚೀನಾ ಎದುರಾಳಿಯ ಜೊತೆಗಿನ ಎಂಟು ಮುಖಾಮುಖಿಗಳಲ್ಲಿ ಮೂರು ಸಲವಷ್ಟೇ ಜಯಗಳಿಸಿದ್ದರು. ಇದಕ್ಕೆ ಮೊದಲು, ಪುರುಷರ ಸಿಂಗಲ್ಸ್‌ನಲ್ಲಿ ಆಯುಷ್ ಶೆಟ್ಟಿ 19–21, 11–21 ರಲ್ಲಿ ನೇರ ಗೇಮ್‌ಗಳಿಂದ ಇಂಡೊನೇಷ್ಯಾದ ಅಲ್ವಿ ಫರ್ಹಾನ್ ಅವರಿಗೆ ಮಣಿದರು. ಇಬ್ಬರೂ ಜೂನಿಯರ್ ಹಂತದಿಂದಲೇ ಎದುರಾಳಿಗಳಾಗಿದ್ದು, ಈ ಪಂದ್ಯ ಹೋರಾಟದ ನಿರೀಕ್ಷೆ ಮೂಡಿಸಿತ್ತು. ಆದರೆ, ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಫರ್ಹಾನ್ ಅವರಿಗೆ ಆಯುಷ್ ಸಾಟಿಯಾಗಲಿಲ್ಲ. ಗೆಲುವಿನೊಡನೆ ಫರ್ಹಾನ್ ಕ್ವಾರ್ಟರ್‌ಫೈನಲ್‌ಗೆ ಸ್ಥಾನ ಕಾದಿರಿಸಿದರು.
ಆಯುಷ್ ಮೊದಲ ಸುತ್ತಿನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಶಿ ಯೂ ಕೀ ಅವರನ್ನು ಸೋಲಿಸಿ ಸಂಚಲನ ಮೂಡಿಸಿದ್ದರು. ಭಾರತದ ಇನ್ನೊಬ್ಬ ಪ್ರಮುಖ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಬುಧವಾರ ಹೊರಬಿದಿದ್ದರು.