ಸಿನಿಮಾದಲ್ಲಿ ಕಂಟೆಂಟ್ ಇದ್ದರೆ.. ರನ್ ಟೈಮ್ ಒಂದು ಮ್ಯಾಟರ್ ಅಲ್ಲವೇ ಅಲ್ಲ..!
ಹೈದರಾಬಾದ್: ಇದು ಪ್ಯಾನ್ ಇಂಡಿಯಾ ಯುಗ. ಲಾಭದ ಉದ್ದೇಶವನ್ನಿಟ್ಟುಕೊಂಡು ಒಂದು ಸಿನಿಮಾ ಎರಡು ಭಾಗಗಳಾಗಿ ಬರುವುದು ಈಗ ಒಂದು ಲೆಕ್ಕದಲ್ಲಿ ಟ್ರೆಂಡ್ ಎಂದರೆ ತಪ್ಪಾಗದು. ಮೊದಲೆಲ್ಲ ಒಂದು ಚಿತ್ರ ಸಾಮಾನ್ಯವಾಗಿ ಒಂದೂವರೆಯಿಂದ ಎರಡೂ ಗಂಟೆಯವರೆಗೆ ಇರುತ್ತಿತ್ತು. ಈಗ ಮೂರು – ಮೂರುವರೆ ಗಂಟೆಯೂ ಇರುತ್ತದೆ. ಹಿಂದೆ ಸ್ಟಾರ್‌ಡಮ್ ಇದ್ದರೆ ಸಿನಿಮಾ ಓಡುತ್ತಿತ್ತು. ಈಗ ಸ್ಟಾರ್‌ಡಮ್ ಜತೆ ಕಂಟೆಂಟ್ ಇದ್ದರೆ ಮಾತ್ರ ಪ್ರೇಕ್ಷಕರು ಆ ಚಿತ್ರವನ್ನು ನೋಡುತ್ತಾರೆ. ಕೆಲವೊಮ್ಮೆ ಸ್ಟಾರ್‌ಡಮ್ ಇದ್ರೂ ಕಂಟೆಂಟ್ ಇಲ್ಲದಿದ್ರೆ ಅದು ಎಷ್ಟು ದೊಡ್ಡ ಬಜೆಟ್‌ನ ಸಿನಿಮಾವಾದ್ರೂ ಅದಕ್ಕೆ ಸೋಲು ಖಚಿತ.! ಸಿನಿಮಾ ಅಂದರೆ ಕೇವಲ ಎರಡೂವರೆ ಗಂಟೆಗಳೇ ಇರಬೇಕಾ..? ಕಥೆ ಚೆನ್ನಾಗಿದ್ದರೆ ಮೂರು ಅಲ್ಲ, ಮೂರೂವರೆ ಗಂಟೆಯಾದರೂ ನಮ್ಮ ಪ್ರೇಕ್ಷಕರು ನೋಡುತ್ತಾರೆ ಎನ್ನುವುದು ಕೆಲ ನಿರ್ದೇಶಕರ ಅಭಿಪ್ರಾಯ. ಸಿನಿಮಾದ ಕಥೆ ಚೆನ್ನಾಗಿದ್ದರೆ ಸಾಕು ಅದರ ರನ್ ಟೈಮ್ ಮ್ಯಾಟರ್ ಆಗಲ್ಲ ಎನ್ನುವುದಕ್ಕೆ ಇತ್ತೀಚೆಗೆ ಬಂದಿರುವ ಕೆಲ ಸಿನಿಮಾಗಳು ಉತ್ತಮ ಉದಾಹರಣೆಯಾಗಿ ನಿಂತಿದೆ. ಟಾಲಿವುಡ್ ಜೊತೆಗೆ ಬಾಲಿವುಡ್‌ನಲ್ಲೂ ರನ್ ಟೈಮ್ ಹೆಚ್ಚಿರುವ ಸಿನಿಮಾಗಳು ಬಂದು ಯಶಸ್ವಿಯಾಗಿದೆ. ಕಲವರು ನಿಧಾನವಾಗಿ ಇದನ್ನೇ ಸಕ್ಸಸ್ ಫಾರ್ಮುಲಾ ಆಗಿ ಬದಲಾಯಿಸುತ್ತಿದ್ದಾರೆ.
ಯಶ್ ಅಭಿನಯದ ʼಟಾಕ್ಸಿಕ್ʼ ಚಿತ್ರ 3 ಗಂಟೆ 14 ನಿಮಿಷ ಇರಲಿದೆ ಎನ್ನಲಾಗುತ್ತಿದೆ. ಆ ಮೂಲಕ ಪ್ಯಾನ್ ಇಂಡಿಯಾದ ಮತ್ತೊಂದು ಬಿಗ್ ಬಜೆಟ್ ಚಿತ್ರ ಹೆಚ್ಚು ರನ್ ಟೈಮ್‌ನೊಂದಿಗೆ ಬರುತ್ತಿದೆ. ಹಾಗಂತ ಮಾತ್ರಕ್ಕೆ ಇಷ್ಟು ರನ್ ಟೈಮ್ ಇರುವ ಚಿತ್ರ ಬರುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಿನ ವರ್ಷದಲ್ಲಿ ಬಂದಿರುವ ಹೆಚ್ಚು ರನ್ ಟೈಮ್‌ವುಳ್ಳ ಸಿನಿಮಾಗಳ ಕುರಿತ ಒಂದು ಮಾಹಿತಿ ಇಲ್ಲಿದೆ..
ಸಾಮಾನ್ಯವಾಗಿ ಸಿನಿಮಾಗಳಿಗೆ ಎರಡೂವರೆ ಗಂಟೆಗಳಿರುವುದು 'ಐಡಿಯಲ್ ರನ್ ಟೈಮ್' ಎನ್ನುತ್ತಾರೆ. ಆದರೆ ಈಗ ಮೇಕರ್ಸ್ ಅದನ್ನು ಬದಲಾಯಿಸುತ್ತಿದ್ದಾರೆ. 2.30 ಅಲ್ಲ 3.30 ಗಂಟೆಗಳ ಸಿನಿಮಾ ಮಾಡುತ್ತೇವೆ ಎನ್ನುತ್ತಿದ್ದಾರೆ. ಇತ್ತೀಚೆಗೆ 'ಪುಷ್ಪ 2' ರಿಲೋಡೆಡ್ ಆವೃತ್ತಿಯು 3.44 ಗಂಟೆಗಳಿತ್ತು. ಅದಕ್ಕೂ ಮುನ್ನ ಡೈರೆಕ್ಟ್ ರಿಲೀಸ್ ನಲ್ಲೂ ನಿರ್ದೇಶಕ ಸುಕುಮಾರ್ 3.24 ಗಂಟೆಗಳ ರನ್ ಟೈಮ್ ನೊಂದಿಗೆ ಬಂದಿದ್ದರು. ಹಿಂದಿಯಲ್ಲಿ ರಣ್ಬೀರ್ ಕಪೂರ್ 'ಅನಿಮಲ್' ಸಿನಿಮಾ ಕೂಡ 3.21 ಗಂಟೆಗಳ ಸುದೀರ್ಘ ಅವಧಿಯೊಂದಿಗೆ ಬಿಡುಗಡೆಯಾಗಿತ್ತು. 3 ಗಂಟೆಗೂ ಹೆಚ್ಚಿನ ರನ್ ಟೈಮ್ ಇರುವ ಸಿನಿಮಾಗಳು ಸೂಪರ್ ಹಿಟ್.! ಮೂರು ಗಂಟೆಗಳ ಸಿನಿಮಾ ಎಂದರೆ ನಮ್ಮಲ್ಲಿ ಬಹಳ ಅಪರೂಪ. ಅಷ್ಟು ದೊಡ್ಡ ಸಿನಿಮಾ ನೋಡಬೇಕಾದರೆ ಅದರಲ್ಲಿ ವಿಷಯವೂ ಬಹಳಷ್ಟಿರಬೇಕು. ಕಾಕತಾಳೀಯವೋ ಏನೋ, ಆದರೆ ಇತ್ತೀಚೆಗೆ 3 ಗಂಟೆಗೂ ಹೆಚ್ಚು ಅವಧಿಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಾಸಿನ ಮಳೆಗರೆದಿವೆ.
ಅದು 'ಪುಷ್ಪ 2', 'ಅನಿಮಲ್' ಮಾತ್ರವಲ್ಲ.'ಆರ್.ಆರ್.ಆರ್' (RRR) ಹಾಗೂ 'ಕುಬೇರ' ಕೂಡ. ಇವುಗಳ ರನ್ ಟೈಮ್ ಕೂಡ 3 ಗಂಟೆಗೂ ಹೆಚ್ಚೇ ಇದೆ. ಕಳೆದ ವರ್ಷ ರನ್ ಟೈಮ್ ಮೇಲಿದ್ದ ಎಲ್ಲಾ ಅನುಮಾನಗಳನ್ನು ಸಂಪೂರ್ಣವಾಗಿ ಅಳಿಸಿಹಾಕಿದ ಸಿನಿಮಾ ರಣ್ವೀರ್ ಸಿಂಗ್ ಅವರ 'ಧುರಂಧರ್'. ಈ ಸಿನಿಮಾದ ಮೊದಲ ಭಾಗ ಬರೋಬ್ಬರಿ 3.32 ಗಂಟೆಗಳ ಅವಧಿಯೊಂದಿಗೆ ಬಂದು 1400 ಕೋಟಿ ರೂ. ಕಲೆಕ್ಷನ್ ಮಾಡಿತು. ಇನ್ನು ಎರಡನೇ ಭಾಗ 3.49 ಗಂಟೆಗಳೊಂದಿಗೆ ಬಂದು ಬರೋಬ್ಬರಿ 1800 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಎರಡೂ ಸಿನಿಮಾಗಳ ಯಶಸ್ಸನ್ನು ನೋಡಿದ ಮೇಲೆ ಸಿನಿಮಾದ ಉದ್ದ ಅಥವಾ ರನ್ ಟೈಮ್ ಅನ್ನೋದು ಒಂದು ಲೆಕ್ಕವೇ ಅಲ್ಲ ಎನ್ನವುದು ಸಾಬೀತಾಗಿದೆ.