ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿದರೂ 370ನೇ ವಿಧಿ ಮರಳಲ್ಲ: ಬಿಜೆಪಿ ತಿರುಗೇಟು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದು ಕರೆ ನೀಡಿದ್ದ ಕಾಶ್ಮೀರದ ಮುಖ್ಯ ಧರ್ಮಗುರು ಮೀರ್ವೇಜ್ ಉಮರ್ ಫಾರೂಕ್ ಅವರಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮೀರ್ವೇಜ್ ಅವರ ಇಂತಹ ಹೇಳಿಕೆಗಳು ಜನರನ್ನು ಪ್ರಚೋದಿಸುವ ಮತ್ತು ವರ್ಷಗಳ ಹಿಂಸಾಚಾರದ ನಂತರ ಕಣಿವೆಯಲ್ಲಿ ನೆಲೆಸಿರುವ ಶಾಂತಿಯುತ ವಾತಾವರಣವನ್ನು ಮತ್ತೆ ಕದಡುವ ಯತ್ನವಾಗಿವೆ ಎಂದು ಬಿಜೆಪಿ ಖಂಡಿಸಿದೆ. ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ನೀಡಿದ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್, 2019ರ ಆಗಸ್ಟ್ 5ರಂದು ಸಂಸತ್ತು 370ನೇ ವಿಧಿಯನ್ನು ರದ್ದುಗೊಳಿಸಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇದನ್ನು ದೇಶದ ಅತ್ಯುನ್ನತ ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ. ಹೀಗಿರುವಾಗ 370ನೇ ವಿಧಿ ಇನ್ಮುಂದೆ ಎಂದಿಗೂ ಮರಳಿ ಬರಲು ಸಾಧ್ಯವಿಲ್ಲ ಎಂಬುದನ್ನು ಮೀರ್ವೇಜ್ ಉಮರ್ ಫಾರೂಕ್ ಅರ್ಥಮಾಡಿಕೊಳ್ಳಬೇಕು. ಸಂಸತ್ತು ಈ ವಿಧಿಯನ್ನು ಶಾಶ್ವತವಾಗಿ ಹೂತುಹಾಕಿದ್ದು, ಅದನ್ನು ಬದಲಾಯಿಸಲು ಯಾವುದೇ ರಾಜಕೀಯ ಪಕ್ಷ ಅಥವಾ ಒತ್ತಡದ ಗುಂಪುಗಳಿಂದ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಂತಿಯ ವಾತಾವರಣವನ್ನು ಹಾಳುಮಾಡುವ ಇಂತಹ ಹೇಳಿಕೆಗಳು ಕಾಶ್ಮೀರವನ್ನು ಮತ್ತೆ ಹಳೆಯ ಹಿಂಸಾಚಾರದ ದಿನಗಳಿಗೆ ತಳ್ಳುವ ಅಪಾಯವನ್ನು ಹೊಂದಿವೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ದೇಶ ದೊಡ್ಡ ಬೆಲೆ ನೀಡಿದೆ. ನಮ್ಮ ವೀರ ಭದ್ರತಾ ಸಿಬ್ಬಂದಿ, ಸಾರ್ವಜನಿಕರು ಹಾಗೂ ರಾಜಕೀಯ ಕಾರ್ಯಕರ್ತರ ತ್ಯಾಗ ಮತ್ತು ಬಲಿದಾನಗಳನ್ನು ರಾಜಕೀಯ ಪ್ರೇರಿತ ಹೇಳಿಕೆಗಳ ಮೂಲಕ ಕಡೆಗಣಿಸಲು ಎಂದಿಗೂ ಬಿಡುವುದಿಲ್ಲ. ಕಣಿವೆಯ ಜನತೆಯು ಈಗಾಗಲೇ ಸಾಕಷ್ಟು ಬಂದ್‌ಗಳು, ಕಲ್ಲು ತೂರಾಟ ಮತ್ತು ರಕ್ತಪಾತಗಳನ್ನು ಕಂಡಿದ್ದಾರೆ. ಈಗಿನ ಯುವಜನತೆ ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ, ಹೂಡಿಕೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ಈಗಾಗಲೇ ಸಂವಿಧಾನಾತ್ಮಕವಾಗಿ ಮತ್ತು ಸುಪ್ರೀಂ ಕೋರ್ಟ್‌ನಿಂದ ಅಂತಿಮಗೊಂಡಿರುವ ವಿಷಯದ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನ ಸಫಲವಾಗುವುದಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ 'ರಾಜ್ಯದ ಸ್ಥಾನಮಾನ'ವನ್ನು ಮರಳಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.