ಪಾಕ್ ಯುದ್ಧವಿಮಾನ ಹೊಡೆದುರುಳಿಸಿದ್ದ ಪೈಲಟ್ ಅಭಿನಂದನ್ ವರ್ಧಮಾನ್ IAFಗೆ ನಿವೃತ್ತಿ
ನವದೆಹಲಿ: 2019ರ ಫೆಬ್ರವರಿಯಲ್ಲಿ ಪಾಕಿಸ್ತಾನದ ವಾಯುಪಡೆಯ ಯುದ್ಧವಿಮಾನವನ್ನು ಹೊಡೆದುರುಳಿಸಿದ ಬಳಿಕ ಪಾಕಿಸ್ತಾನದಲ್ಲಿ ಮೂರು ದಿನಗಳ ಕಾಲ ಬಂಧಿಯಾಗಿದ್ದ ಭಾರತೀಯ ವಾಯುಪಡೆಯ (IAF) ಫೈಟರ್ ಪೈಲಟ್ ಅಭಿನಂದನ್ ವರ್ಧಮಾನ್ ಅವರು ವಾಯುಪಡೆಯ ಸೇವೆಯಿಂದ ಅವಧಿಗೂ ಮುನ್ನ ನಿವೃತ್ತರಾಗಿದ್ದಾರೆ. ಇದೀಗ ಅವರು ವಾಣಿಜ್ಯ ಪೈಲಟ್ ಆಗಿ ತಮ್ಮ ಹೊಸ ವಿಮಾನಯಾನ ವೃತ್ತಿಜೀವನ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. 22 ವರ್ಷಗಳ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಗ್ರೂಪ್ ಕ್ಯಾಪ್ಟನ್ ಹಾಗೂ ವೀರಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್ ಅವರು ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91ಗೆ ಪೈಲಟ್ ಆಗಿ ಸೇರ್ಪಡೆಯಾಗಿದ್ದಾರೆ ಎಂದು ಸುದ್ದಿಸಂಸ್ಥೆ PTI ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ವರದಿ ಪ್ರಕಾರ, ಅಭಿನಂದನ್ ಅವರು ಆಗಸ್ಟ್‌ನಲ್ಲಿ FLY91 ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಆದರೆ ಈ ಕುರಿತು ಅಭಿನಂದನ್ ವರ್ಧಮಾನ್ ಅವರು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. FLY91 ಸಂಸ್ಥೆಯ ವಕ್ತಾರರೂ ಉದ್ಯೋಗಿಗಳ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಇದು ಖಾಸಗಿ ವಿಚಾರ ಎಂದು ತಿಳಿಸಿದ್ದಾರೆ. 2024ರ ಮಾರ್ಚ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದ FLY91 ಸದ್ಯ ಆರು ATR 72-600 ವಿಮಾನಗಳನ್ನು ಹೊಂದಿದೆ. ಗೋವಾ ಮತ್ತು ಹೈದರಾಬಾದ್ ಸಂಸ್ಥೆಯ ಪ್ರಮುಖ ಕಾರ್ಯಾಚರಣಾ ನೆಲೆಗಳಾಗಿವೆ.