Aug 27, 2026, 8:06 PM IST ಮುಂದಿನ 3 ದಿನಗಳಲ್ಲಿ ಮತ್ತೊಂದು ಭೀಕರ ಜಲಪ್ರಳಯದ ಭೀತಿ... ನೇಪಾಳಕ್ಕೆ ಎಚ್ಚರಿಕೆ ನೀಡಿದ ಚೀನಾ
ಕಠ್ಮಂಡು: ನೇಪಾಳ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಮತ್ತೊಂದು ಭೀಕರ ಪ್ರವಾಹ ಎದುರಾಗುವ ಆತಂಕ ಎದುರಾಗಿದೆ. ಉಭಯ ದೇಶಗಳ ಗಡಿಯ ಮೇಲ್ಭಾಗದಲ್ಲಿ ನೂತನವಾಗಿ ರೂಪುಗೊಂಡಿರುವ 'ಬ್ಯಾರಿಯರ್ ಲೇಕ್' (ತಡೆಗೋಡೆ ಸರೋವರ) ಮುಂದಿನ ಮೂರು ದಿನಗಳಲ್ಲಿ ಒಡೆದು ಅಪಾರ ಪ್ರಮಾಣದ ನೀರು ಕೆಳಭಾಗಕ್ಕೆ ಹರಿಯುವ ಸಾಧ್ಯತೆಯಿದೆ ಎಂದು ಚೀನಾ, ನೇಪಾಳಕ್ಕೆ ತುರ್ತು ಎಚ್ಚರಿಕೆ ನೀಡಿದೆ.
ಆಗಸ್ಟ್ 26ರಂದು ಸಂಭವಿಸಿದ ಹಿಮನದಿ ಕುಸಿತದಿಂದಾಗಿ ನೇಪಾಳದ ಭೋಟೆಕೋಶಿ ನದಿಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಅದೇ ದಿನ ಚೀನಾದ ಗಿರೋಂಗ್ ಪೋರ್ಟ್ ಗಡಿ ಪ್ರದೇಶದಲ್ಲಿ ಭಾರಿ ಮಣ್ಣಿನ ಕುಸಿತ ಸಂಭವಿಸಿತ್ತು. ಈ ಅವಳಿ ವಿಕೋಪಗಳಿಂದ ನಲುಗಿರುವ ಪ್ರದೇಶಕ್ಕೆ ಈಗ ಹೊಸ ಸರೋವರ ಒಡೆಯುವ ಭೀತಿ ಎದುರಾಗಿದೆ.
ಭೋಟೆಕೋಶಿ ಪ್ರವಾಹಕ್ಕೆ ಮುಖ್ಯ ಕಾರಣವೇನು?
ನೇಪಾಳದ ಜಲವಿಜ್ಞಾನ ಮತ್ತು ಹವಾಮಾನ ಇಲಾಖೆ (DHM) ನೀಡಿರುವ ಮಾಹಿತಿಯಂತೆ, ಈ ಪ್ರವಾಹಕ್ಕೆ ಮಳೆ ಕಾರಣವಲ್ಲ. ಉಪಗ್ರಹ ಚಿತ್ರಗಳ ಪ್ರಕಾರ, ಲ್ಯಾಂಗ್‌ಟಾಂಗ್ ಲಿರುಂಗ್ ಹಿಮನದಿಯ ಉತ್ತರ ಭಾಗದಿಂದ ಸುಮಾರು 5,200 ಮೀಟರ್ ಎತ್ತರದಲ್ಲಿದ್ದ ಬೃಹತ್ ಮಂಜುಗಡ್ಡೆ ಮತ್ತು ಬಂಡೆಯ ಭಾಗ ಕುಸಿದು 1,200 ಮೀಟರ್ ಕೆಳಗಿರುವ ಲೆಂಡೆ ನದಿಗೆ (ಭೋಟೆಕೋಶಿಯ ಉಪನದಿ) ಬಿದ್ದಿದೆ. ಹೀಗೆ ಬಿದ್ದ ಹಿಮ ಮತ್ತು ಕಲ್ಲು-ಮಣ್ಣಿನ ರಾಶಿ ನದಿಯ ಕಿರಿದಾದ ಕಣಿವೆಯನ್ನು ತಡೆದು, ನಂತರ ದಿಢೀರನೆ ಒಡೆದುಹೋಗಿ ನೀರು, ಹಿಮ ಮತ್ತು ಕಲ್ಲುಗಳನ್ನು ಒಳಗೊಂಡ ಭಾರಿ ಪ್ರವಾಹ ರಸುವಾ, ನುವಾಕೋಟ್, ಧಾಡಿಂಗ್, ಗೋರ್ಖಾ ಮತ್ತು ಚಿತ್ವಾನ್ ಪ್ರದೇಶಗಳತ್ತ ನುಗ್ಗಿದೆ.