ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಶೀಘ್ರವೇ ಗುಡ್ನ್ಯೂಸ್? ಸೀಲ್ಡ್ ಲಿಕ್ಕರ್ ಬಾಟಲ್ ಸಾಗಾಟಕ್ಕೆ ಅನುಮತಿ?
Bangalore Metro Rail Corporation Limited (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ರೈಲುಗಳಲ್ಲಿ ಸೀಲ್ಡ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಶೀಘ್ರದಲ್ಲೇ ಅನುಮತಿ ನೀಡುವ ಕುರಿತು ಚರ್ಚೆ ನಡೆಸುತ್ತಿದೆ. ಈ ವಿಚಾರ ಹಲವು ಸಭೆಗಳಲ್ಲಿ ಪ್ರಸ್ತಾಪವಾಗಿದ್ದು, ತಾತ್ವಿಕವಾಗಿ ಒಪ್ಪಿಗೆ ಸಿಕ್ಕಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ನಿಯಮ ಜಾರಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎನ್ನಲಾಗಿದೆ.
ಈ ಕುರಿತು Delhi Metro Rail Corporation ಮಾದರಿಯನ್ನು ಅನುಸರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಸ್ತುತ ದೆಹಲಿ ಮೆಟ್ರೋದ ಏರ್‌ಪೋರ್ಟ್ ಮಾರ್ಗದಲ್ಲಿ ಸೀಲ್ಡ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಅನುಮತಿ ಇದೆ. ನಮ್ಮ ಮೆಟ್ರೋ ಏರ್‌ಪೋರ್ಟ್ ಸಂಪರ್ಕ ಹೊಂದಿದ ಹಿನ್ನೆಲೆ, ಬೆಂಗಳೂರಲ್ಲಿಯೂ ಇದೇ ರೀತಿಯ ನಿಯಮ ಜಾರಿಗೆ ತರಲು ಸಮಾಲೋಚನೆ ನಡೆಯುತ್ತಿದೆ. ಅನುಮೋದನೆ ಸಿಕ್ಕ ಬಳಿಕ ಮೆಟ್ರೋ ನಿಯಮಾವಳಿಗಳಲ್ಲಿ ಅಗತ್ಯ ತಿದ್ದುಪಡಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಿಸಲು ಅನುಮತಿ ಇಲ್ಲ. ಆದಾಗ್ಯೂ, ಮದ್ಯ ಸೇವಿಸಿದವರು ನಿಯಮಿತ ಮಿತಿಯೊಳಗೆ ಹಾಗೂ ಇತರರಿಗೆ ಅಸೌಕರ್ಯ ಉಂಟುಮಾಡದಂತೆ ಪ್ರಯಾಣಿಸಬಹುದು. ಸಾರ್ವಜನಿಕ ಸಾರಿಗೆಯಲ್ಲಿ ಸೀಲ್ಡ್ ಮಾಡಿದ ಬಾಟಲಿಯನ್ನು ಸಾಮಾನ್ಯ ಸರಕುಗಳಂತೆ ಸಾಗಿಸಲು ತೊಂದರೆ ಇರಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಕುರಿತು The New Indian Express ವರದಿ ಮಾಡಿದ್ದು, ಕೆಲವೆಡೆ ಭದ್ರತಾ ಸಿಬ್ಬಂದಿ ಸೀಲ್ಡ್ ಬಾಟಲಿಗಳನ್ನು ಸಾಗಿಸಲು ಅವಕಾಶ ನೀಡಿದ ಉದಾಹರಣೆಗಳೂ ಇವೆ ಎಂದು ತಿಳಿಸಿದೆ.