ದೇಶದ ಭದ್ರತೆಗೆ ರಾಹುಲ್ ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ: ಕಿರಣ್ ರಿಜಿಜು ಕಿಡಿ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತದ ಭದ್ರತೆಗೆ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಗಂಭೀರ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಭಾರತ ವಿರೋಧಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಹಾಗೂ ಮಾವೋವಾದಿ ಮತ್ತು ಉಗ್ರಗಾಮಿಗಳನ್ನು ಭೇಟಿಯಾಗುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ರಿಜಿಜು, ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ, ರಾಹುಲ್ ಗಾಂಧಿ ಅವರು ಭಾರತ-ಚೀನಾ ಗಡಿ ವಿವಾದ ಮತ್ತು ರಕ್ಷಣಾ ಒಪ್ಪಂದಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
"ಭಾರತವು ಇಂತಹ ವಿರೋಧ ಪಕ್ಷದ ನಾಯಕನನ್ನು ಹಿಂದೆಂದೂ ನೋಡಿಲ್ಲ," ಎಂದ ಅವರು, ರಾಷ್ಟ್ರೀಯ ಭದ್ರತೆ ಎಂಬುದು ಅತ್ಯಂತ ಸೂಕ್ಷ್ಮ ವಿಚಾರ. ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದು ಸರಿಯಲ್ಲ. ರಾಹುಲ್ ಗಾಂಧಿ ಅವರು ಭಾರತ ವಿರೋಧಿ ಶಕ್ತಿಗಳ ಭಾಷೆಯನ್ನು ಮಾತನಾಡುತ್ತಿದ್ದಾರೆ, ಚೀನಾ ಗಡಿ ವಿಚಾರದಲ್ಲಿ ರಾಹುಲ್ ಗಾಂಧಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಮತ್ತು ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಅವರ ನಡವಳಿಕೆಯನ್ನು 'ಬಾಲಿಶ' ಎಂದು ಕರೆದ ಸಚಿವರು, "ವಿರೋಧ ಪಕ್ಷದ ನಾಯಕ ಇಡೀ ವಿರೋಧ ಪಕ್ಷವನ್ನು ಪ್ರತಿನಿಧಿಸುತ್ತಾರೆ. ಆದರೆ ಅವರು ಸದನದ ಹೊರಗೆ ಹೋಗಿ ಜನರನ್ನು ದೇಶದ್ರೋಹಿಗಳು ಎಂದು ಕರೆಯುವುದು, ನಾಟಕೀಯವಾಗಿ ಧರಣಿ ಕೂರುವುದು ಮತ್ತು ಪ್ರಕಟವಾಗದ ಪುಸ್ತಕದಿಂದ ಓದುವಂತೆ ಹಠ ಹಿಡಿಯುವುದು ಇವೆಲ್ಲವೂ ಬಾಲಿಶ ನಡವಳಿಕೆಗಳು," ಎಂದು ಟೀಕಿಸಿದರು.ಎಪ್ಸ್ಟೀನ್ ಫೈಲ್ಸ್ ವಿವಾದದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಎಳೆದು ತಂದ ರಾಹುಲ್ ಗಾಂಧಿ ಕ್ರಮವನ್ನು ಖಂಡಿಸಿದ ರಿಜಿಜು. "ರಾಹುಲ್ ಗಾಂಧಿ ಸತ್ಯವಿಲ್ಲದೆ ಮಾತನಾಡುತ್ತಾರೆ. ಪ್ರಧಾನಿಯವರು ಯಾರನ್ನಾದರೂ ಭೇಟಿಯಾಗಿದ್ದರೆ ಅಥವಾ ರಾಹುಲ್ ಗಾಂಧಿ ಬಳಿ ಯಾವುದೇ ದಾಖಲೆಗಳಿದ್ದರೆ ಅವುಗಳನ್ನು ಪ್ರಸ್ತುತಪಡಿಸಲಿ. ಸುಖಾ ಸುಮ್ಮನೆ ಪ್ರಧಾನಿಯವರ ಹೆಸರನ್ನು ಬಳಸುತ್ತಿರುವುದು ನಿರಾಶಾದಾಯಕ," ಎಂದರು.
"ರಾಹುಲ್ ಗಾಂಧಿ ಅವರು ದೇಶದ ಒಳಗೆ ಮತ್ತು ಹೊರಗೆ ನಕ್ಸಲೀಯರು, ಉಗ್ರಗಾಮಿಗಳು ಮತ್ತು ಜಾರ್ಜ್ ಸೊರೊಸ್ ಅಂತಹ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಅವರು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ," ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರ ಇತ್ತೀಚಿನ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ರಿಜಿಜು, "ಒಂದು ಕಾಲದಲ್ಲಿ ಕಾಂಗ್ರೆಸ್ ಪ್ರಬುದ್ಧ ನಾಯಕರನ್ನು ಹೊಂದಿತ್ತು. ಆದರೆ ಇಂದು ಕಾಂಗ್ರೆಸ್ ಸಂಪೂರ್ಣವಾಗಿ ರಾಹುಲ್ ಗಾಂಧಿ ಅವರಂತೆಯೇ ಬದಲಾಗಿದೆ. ಸತತ ಮೂರು ಬಾರಿ ಸೋತರೂ ಅದೇ ನಾಯಕನನ್ನು ಮುಂದುವರಿಸುತ್ತಿರುವುದು ಆಶ್ಚರ್ಯಕರ ಎಂದು ಹೇಳಿದರು.