ಅನಿಲ್ ಅಂಬಾನಿಗೆ ಹಿನ್ನಡೆ: ವಂಚನೆ ಪ್ರಕರಣದ ತನಿಖೆಗೆ ಹೈಕೋರ್ಟ್ ಆದೇಶ
ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ಅವರ ಕಂಪನಿಗಳ ಬ್ಯಾಂಕ್ ಖಾತೆಗಳನ್ನು 'ವಂಚನೆ' ಎಂದು ವರ್ಗೀಕರಿಸುವ ಪ್ರಕ್ರಿಯೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಮುಂಬೈ ಹೈಕೋರ್ಟ್ ಸೋಮವಾರ (ಫೆ.23) ರದ್ದುಗೊಳಿಸಿದೆ.
ಕಳೆದ ಡಿಸೆಂಬರ್ 2025 ರಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಬ್ಯಾಂಕ್‌ಗಳ ಕ್ರಮಕ್ಕೆ ತಡೆ ನೀಡಿತ್ತು. ಈಗ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅನ್ಖಾದ್ ಅವರಿದ್ದ ವಿಭಾಗೀಯ ಪೀಠವು ಆ ಆದೇಶವನ್ನು "ಅಕ್ರಮ" ಎಂದು ಕರೆದು ರದ್ದುಗೊಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಐಡಿಬಿಐ (IDBI) ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ವಂಚನೆ ತನಿಖೆ ಮುಂದುವರಿಸಲು ಅನುಮತಿ ನೀಡಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ (RCom) ಮತ್ತು ಅದರ ಅಂಗಸಂಸ್ಥೆಗಳು ಬ್ಯಾಂಕ್‌ಗಳಿಂದ ಪಡೆದ ಸಾವಿರಾರು ಕೋಟಿ ರೂಪಾಯಿ ಸಾಲವನ್ನು ದುರುಪಯೋಗಪಡಿಸಿಕೊಂಡಿವೆ ಎಂಬ ಆರೋಪವಿದೆ. ವಿಧಿವಿಜ್ಞಾನ ಲೆಕ್ಕಪರಿಶೋಧನೆ ವರದಿಯಲ್ಲಿ ಹಣವನ್ನು ಬೇರೆಡೆಗೆ ವರ್ಗಾಯಿಸಿರುವುದು ಪತ್ತೆಯಾಗಿದೆ. ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಅಂಬಾನಿ ಪರ ವಕೀಲರು ಮಾಡಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ತೀರ್ಪಿನಿಂದಾಗಿ ಈಗ ಬ್ಯಾಂಕ್‌ಗಳು ಅನಿಲ್ ಅಂಬಾನಿ ಅವರ ಖಾತೆಗಳನ್ನು ಅಧಿಕೃತವಾಗಿ 'ಫ್ರಾಡ್' ಎಂದು ಘೋಷಿಸಲು ದಾರಿಯಾದಂತಾಗಿದೆ. ಇದು ಅವರ ವ್ಯವಹಾರ ಮತ್ತು ಸಾಲ ಪಡೆಯುವ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.