ಟ್ರಂಪ್ ಹತ್ಯೆಗೆ ಇರಾನ್ ಮಾಡಿತ್ತು ಸಂಚು, ಬಯಲಾಗುತ್ತಿದ್ದಂತೆ ಖಮೇನಿ ಕತೆ ಮುಗಿಸಿದ ಅಮೆರಿಕ ಇಸ್ರೇಲ್
ವಾಶಿಂಗ್ಟನ್ : ಅಮರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಅತೀ ರಣಭೀಕರ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲ್ ಖಮೇನಿಯನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿದೆ. ದೇಶದ ನಾಯಕನನ್ನೇ ಅಮೆರಿಕ ಹಾಗೂ ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಮುಗಿಸಲಾಗಿದೆ. ಇದೀಗ ಅಮೆರಿಕ, ಇರಾನ್ ಹಾಗೂ ಖಮೇನಿ ಮೇಲೆ ಗಂಭೀರ ಆರೋಪ ಮಾಡಿದೆ. ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಇರಾನ್ ಪ್ರಯತ್ನಿಸಿತ್ತು ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ಮೈಕ್ ವಾಲ್ಟ್ಜ್ ಆರೋಪಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದಾಗ ಅವರು ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಳೆದ 47 ವರ್ಷಗಳಿಂದ ಇರಾನ್ ಸರ್ಕಾರ 'ಅಮೆರಿಕಕ್ಕೆ ಸಾವು' ಎಂದು ಕೂಗುತ್ತಲೇ ಇದೆ. ತಮ್ಮ ಸಂಸತ್ ಅಧಿವೇಶನ ಆರಂಭವಾದಾಗಲೆಲ್ಲಾ ಇಸ್ರೇಲ್ ದೇಶವನ್ನು ಭೂಪಟದಿಂದ ಅಳಿಸಿಹಾಕಲು ಪ್ರಯತ್ನಿಸಿದೆ. ಅವರು ನಿರಂತರ ರಕ್ತಪಾತ ಮತ್ತು ಹತ್ಯಾಕಾಂಡದ ಅಭಿಯಾನವನ್ನೇ ನಡೆಸಿದ್ದಾರೆ. ಯಾವುದೇ ಪ್ರಚೋದನೆ ಇಲ್ಲದಿದ್ದರೂ ಅಮೆರಿಕ ಮತ್ತು ಇಸ್ರೇಲ್ ಮೇಲೆ ಇರಾನ್ ಹಲವು ಬಾರಿ ಸಶಸ್ತ್ರ ದಾಳಿ ನಡೆಸಿದೆ. ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿ, ಮಧ್ಯಪ್ರಾಚ್ಯದಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಇರಾನ್ ಬೆದರಿಕೆಯಾಗಿದೆ. ಅಷ್ಟೇ ಅಲ್ಲ, ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನೂ ಹತ್ಯೆ ಮಾಡಲು ಇರಾನ್ ಯತ್ನಿಸಿತ್ತು ಎಂದು ಮೈಕ್ ವಾಲ್ಟ್ಜ್ ಆರೋಪಿಸಿದ್ದಾರೆ.
ಇರಾನ್ ಮೊಸಳೆ ಕಣ್ಣೀರು ಎಂದ ಅಮೆರಿಕ
ತಾನು ಸಂತ್ರಸ್ತ ಎಂದು ಜಗತ್ತಿನ ಮುಂದೆ ಹೇಳಿಕೊಳ್ಳುವ ಇರಾನ್, ತನ್ನ ಕರಾಳ ಕೃತ್ಯಗಳನ್ನು ಮುಚ್ಚಿಹಾಕಲು ನೇರವಾಗಿ ಮಾತ್ರವಲ್ಲದೆ, ತನ್ನ ನೆರಳಿನಂತಿರುವ ಸಂಘಟನೆಗಳ ಮೂಲಕವೂ ಪ್ರಯತ್ನಿಸುತ್ತಿದೆ," ಎಂದು ವಾಲ್ಟ್ಜ್ ದೂರಿದರು. "ಇರಾನ್‌ನ ಈ ಬೆದರಿಕೆಗಳಿಂದ ಅಮೆರಿಕ, ನಮ್ಮ ಸೈನಿಕರು, ವಿದೇಶಗಳಲ್ಲಿರುವ ನಮ್ಮ ನೆಲೆಗಳು, ಪಾಲುದಾರರು ಮತ್ತು ವಿಶ್ವಾದ್ಯಂತ ಇರುವ ನಮ್ಮ ಮಿತ್ರರಾಷ್ಟ್ರಗಳಿಗೆ ನೇರ ಅಪಾಯವಿದೆ. ಈ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಅಮೆರಿಕ ಎಲ್ಲಾ ಪ್ರಯತ್ನಗಳನ್ನು ಮಾಡಿತ್ತು. ಆದರೆ, ಇರಾನ್ ಆ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು. ಹೀಗಾಗಿ, ಇಸ್ರೇಲ್ ಸರ್ಕಾರದೊಂದಿಗೆ ನಿಕಟ ಸಹಕಾರದೊಂದಿಗೆ, ವಿಶ್ವಸಂಸ್ಥೆಯ ಚಾರ್ಟರ್‌ನ ಆರ್ಟಿಕಲ್ 51ರ ಅಡಿಯಲ್ಲಿ ಈ ಬೆದರಿಕೆಗಳನ್ನು ಎದುರಿಸಲು ಅಮೆರಿಕ ಕಾನೂನು ಕ್ರಮ ಕೈಗೊಂಡಿದೆ," ಎಂದು ಅವರು ಸ್ಪಷ್ಟಪಡಿಸಿದರು.