ವಾರಣಾಸಿ: ಮಾ. 4 ರಂದು ಕಾಶಿ ವಿಶ್ವನಾಥ ಧಾಮದಲ್ಲಿ 'ಫೂಲ್ ಹೋಳಿ' ಸಂಭ್ರಮ
ವಾರಣಾಸಿ: ಹೋಳಿ ಹಬ್ಬದ ಸಂಭ್ರಮಕ್ಕೆ ಇಡೀ ದೇಶ ಸಜ್ಜಾಗುತ್ತಿದ್ದು, ಉತ್ತರ ಪ್ರದೇಶದ ಪವಿತ್ರ ಕ್ಷೇತ್ರ ವಾರಣಾಸಿಯ ಕಾಶಿ ವಿಶ್ವನಾಥ ಧಾಮದಲ್ಲಿ ಮಾರ್ಚ್ 4 ರಂದು ವಿಶೇಷ 'ಫೂಲ್ ಹೋಳಿ' (ಹೂವುಗಳ ಹೋಳಿ) ಆಯೋಜಿಸಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.
ಭಕ್ತರು ಆಧ್ಯಾತ್ಮಿಕ ಮತ್ತು ಸಾಂಪ್ರದಾಯಿಕ ಪರಿಸರದಲ್ಲಿ ಹಬ್ಬವನ್ನು ಆಚರಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಧಾಮದ ಸಂಕೀರ್ಣದಲ್ಲಿರುವ ಶಂಕರಾಚಾರ್ಯ ಚೌಕ್‌ನಲ್ಲಿ ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಹೂವುಗಳ ಮಳೆ ಸುರಿಸುವ ಮೂಲಕ ಹೋಳಿ ಆಚರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂವುಗಳ ಹೋಳಿಯ ಜೊತೆಗೆ ಭಜನೆಗಳು, ಹೋಳಿ ಗೀತೆಗಳು ಮತ್ತು ಸಾಂಪ್ರದಾಯಿಕ ಕಲಾ ಪ್ರದರ್ಶನಗಳು ನಡೆಯಲಿವೆ.
ಹಬ್ಬದ ಪಾವಿತ್ರ್ಯತೆ ಕಾಪಾಡಲು ಭಕ್ತರು ಯಾವುದೇ ರೀತಿಯ ರಾಸಾಯನಿಕ ಬಣ್ಣಗಳು ತರದಂತೆ ಮನವಿ ಮಾಡಲಾಗಿದೆ. ಕೇವಲ ಹೂವುಗಳೊಂದಿಗೆ ಮಾತ್ರ ಹಬ್ಬ ಆಚರಿಸಲು ಅವಕಾಶವಿರುತ್ತದೆ. ಆವರಣದ ಸ್ವಚ್ಛತೆಗಾಗಿ ಪ್ರತ್ಯೇಕ ಏಜೆನ್ಸಿಯನ್ನು ನೇಮಿಸಲಾಗಿದ್ದು, ನಿರಂತರವಾಗಿ ಶುಚಿಗೊಳಿಸುವ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಗಿ ಭದ್ರತೆ: ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ (CRPF) ಮತ್ತು ಖಾಸಗಿ ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇರಿಸಲಾಗಿದೆ.