ದೆಹಲಿ ಸರ್ಕಾರದ ನಾಲ್ಕು ಮಹಿಳಾ ಕಲ್ಯಾಣ ಯೋಜನೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ
ರಾಷ್ಟ್ರ ರಾಜಧಾನಿಯ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆಗೆ ವೇಗ ನೀಡುವ ನಿಟ್ಟಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ದೆಹಲಿ ಸರ್ಕಾರದ ನಾಲ್ಕು ಪ್ರಮುಖ ಯೋಜನೆಗಳನ್ನು (ಫೆ.೦2)ಸೋಮವಾರ ಲೋಕಾರ್ಪಣೆಗೊಳಿಸಿದರು.
ನಗರದ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ "ಸಶಕ್ತ ನಾರಿ, ಸಮೃದ್ಧ ದೆಹಲಿ" ಬೃಹತ್ ಸಮಾವೇಶದಲ್ಲಿ ಈ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ಯಾವುದೆಲ್ಲ ಯೋಜನೆಗೆ ಚಾಲನೆ
ಪಿಂಕ್ ಮೊಬಿಲಿಟಿ ಕಾರ್ಡ್: ಬಸ್‌ಗಳಲ್ಲಿ ಉಚಿತ ಪ್ರಯಾಣದ ಜೊತೆಗೆ ಸಮಗ್ರ ಸಾರಿಗೆ ಸಂಪರ್ಕವನ್ನು ಪಿಂಕ್ ಮೊಬಿಲಿಟಿ ಕಾರ್ಡ್ ಒದಗಿಸಲಿದೆ. ಇದು ಮಹಿಳೆಯರ ಸುರಕ್ಷತೆ ಮತ್ತು ಸ್ವತಂತ್ರ ಸಂಚಾರಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ ಎಂದು ರಾಷ್ಟ್ರಪತಿ ಶ್ಲಾಘಿಸಿದರು.
ಉಚಿತ ಎಲ್‌ಪಿಜಿ ಸಿಲಿಂಡರ್: ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ವರ್ಷಕ್ಕೆ ಎರಡು ಬಾರಿ (ಹೋಳಿ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ) ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ.
ಲಕ್ಷ್ಪತಿ ಬಿಟಿಯಾ ಮತ್ತು ಮೇರಿ ಪೂಂಜಿ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 'ದೆಹಲಿ ಲಕ್ಷ್ಪತಿ ಬಿಟಿಯಾ' ಯೋಜನೆ ಹಾಗೂ ಮಹಿಳೆಯರ ಆರ್ಥಿಕ ಹಕ್ಕುಗಳ ರಕ್ಷಣೆಗಾಗಿ 'ಮೇರಿ ಪೂಂಜಿ, ಮೇರಾ ಅಧಿಕಾರ್' ಅಭಿಯಾನವನ್ನು ರಾಷ್ಟ್ರಪತಿಗಳು ಉದ್ಘಾಟಿಸಿದರು.
ಸಮೃದ್ಧ ದೆಹಲಿಯ ಕನಸು
ಈ ಯೋಜನೆಗಳು ದೆಹಲಿಯನ್ನು ಸಮೃದ್ಧಗೊಳಿಸುವ ದಾರಿಯಲ್ಲಿ ಮಹಿಳೆಯರಿಗೆ ದೊಡ್ಡ ಆಸರೆಯಾಗಲಿವೆ. ಉಚಿತ ಸಾರಿಗೆ ಮತ್ತು ಇಂಧನ ನೆರವು ಮಹಿಳೆಯರ ಆರ್ಥಿಕ ಹೊರೆಯನ್ನು ತಗ್ಗಿಸಿ, ಅವರು ಶಿಕ್ಷಣ ಮತ್ತು ಉದ್ಯೋಗದತ್ತ ಹೆಚ್ಚಿನ ಗಮನಹರಿಸಲು ಸಹಕಾರಿಯಾಗಲಿದೆ ಎಂದು ಕಾರ್ಯಕ್ರಮದಲ್ಲಿ ಆಶಯ ವ್ಯಕ್ತಪಡಿಸಲಾಯಿತು.