3 ಕೋಟಿ ಚಂದಾದಾರರನ್ನು ಹೊಂದುವ ಮೂಲಕ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ
ನವದೆಹಲಿ: ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.
ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್ (YouTube) ಚಾನಲ್ ಈಗ 30 ಮಿಲಿಯನ್ (3 ಕೋಟಿ) ಚಂದಾದಾರರನ್ನು (Subscribers) ಹೊಂದುವ ಮೂಲಕ ವಿಶ್ವದ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ನಾಯಕ ಎಂಬ ಹೆಗ್ಗಳಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ವಿಶ್ವದ ಇತರ ಪ್ರಮುಖ ನಾಯಕರಿಗೆ ಹೋಲಿಸಿದರೆ ಪ್ರಧಾನಿ ಮೋದಿ ಅವರ ಡಿಜಿಟಲ್ ವ್ಯಾಪ್ತಿ ಅಚ್ಚರಿ ಮೂಡಿಸುವಂತಿದೆ.
ಜೈರ್ ಬೋಲ್ಸನಾರೊ: ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಚಂದಾದಾರರ ಸಂಖ್ಯೆ ಮೋದಿ ಅವರಿಗಿಂತ ಕೇವಲ ನಾಲ್ಕನೇ ಒಂದು ಭಾಗದಷ್ಟಿದೆ.
ಡೊನಾಲ್ಡ್ ಟ್ರಂಪ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಮೋದಿ ಅವರು 7 ಪಟ್ಟು ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗಿಂತ ಮೋದಿ ಅವರ ಚಾನಲ್ ಸುಮಾರು 3 ಪಟ್ಟು ಹೆಚ್ಚು ಚಂದಾದಾರರನ್ನು ಹೊಂದಿದೆ. ಆಮ್ ಆದ್ಮಿ ಪಾರ್ಟಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಚಾನಲ್‌ಗಳಿಗಿಂತ 4 ಪಟ್ಟು ಹೆಚ್ಚು ಜನ ಪ್ರಧಾನಿಯನ್ನು ಫಾಲೋ ಮಾಡುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲೂ ವಿಶ್ವ ದಾಖಲೆ
ಕಳೆದ ತಿಂಗಳಷ್ಟೇ ಪ್ರಧಾನಿ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್‌ಗಳನ್ನು ಹೊಂದುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ರಾಜಕಾರಣಿ ಎನಿಸಿಕೊಂಡಿದ್ದರು. 2014ರಲ್ಲಿ ಇನ್‌ಸ್ಟಾಗ್ರಾಮ್ ಸೇರಿದ ಮೋದಿ, ಇಂದು ವಿಶ್ವದ ಅತ್ಯಂತ ಪ್ರಭಾವಶಾಲಿ ಡಿಜಿಟಲ್ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.