ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ವನಿತಾ ಫುಟ್‌ಬಾಲ್ ತಂಡ; ಸರ್ಕಾರಕ್ಕೆ ಮುಜುಗರ
ಗೋಲ್ಡ್ ಕೋಸ್ಟ್: ದಕ್ಷಿಣ ಕೊರಿಯಾ ವಿರುದ್ಧದ ಎಎಫ್‌ಸಿ ಮಹಿಳಾ ಏಷ್ಯನ್ ಕಪ್ 2026 (AFC Women's Asian Cup 2026) ಗುಂಪು ಹಂತದ ಪಂದ್ಯಕ್ಕೂ ಮುನ್ನ ಇರಾನ್ ಮಹಿಳಾ ಫುಟ್‌ಬಾಲ್ ತಂಡ (Iran women’s football team) ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಘಟನೆ ನಡೆದಿದೆ.
ಇರಾನ್ ಅಮೆರಿಕ ಮತ್ತು ಇಸ್ರೇಲ್‌ನಿಂದ ಭಾರೀ ಬಾಂಬ್ ದಾಳಿಗೆ ಒಳಗಾದ ನಂತರ ಮಧ್ಯಪ್ರಾಚ್ಯದ ಪರಿಸ್ಥಿತಿ ಯುದ್ಧಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ದೇಶದಲ್ಲಿನ ಅನಿಶ್ಚಿತತೆಯ ನಡುವೆಯೂ ತಂಡವು ಸೋಮವಾರ (ಮಾ.02) ರಾತ್ರಿ ಗೋಲ್ಡ್ ಕೋಸ್ಟ್ ಕ್ರೀಡಾಂಗಣ (Gold Cost Stadium) ದಲ್ಲಿ ದ. ಕೊರಿಯನ್ನರ ವಿರುದ್ಧ ಪಂದ್ಯದಲ್ಲಿ ಭಾಗವಹಿಸಿ 0-3 ಅಂತರದ ಸೋಲನ್ನು ಅನುಭವಿಸಿತು.
ತವರಿನಲ್ಲಿ ಉದ್ವಿಗ್ನ ಪರಿಸ್ಥಿತಿಯ ಹೊರತಾಗಿಯೂ ಇರಾನ್ ಕೆಚ್ಚೆದೆಯ ಹೋರಾಟವನ್ನು ಪ್ರದರ್ಶಿಸಿತು. ಚಿನ್ನದ ಸಿಂಹ ಮತ್ತು ಸೂರ್ಯನನ್ನು ಒಳಗೊಂಡ ಶಾ ಯುಗದ (Shah-era) ಧ್ವಜಗಳನ್ನು ಬೀಸುವ ಬೆಂಬಲಿಗರು ಕ್ರೀಡಾಂಗಣದಲ್ಲಿ ಕಂಡು ಬಂದರು.
1 907 ರಲ್ಲಿ ಅಳವಡಿಸಿಕೊಂಡ ಇರಾನ್ ನ ಮೊದಲ ಅಧಿಕೃತ ಧ್ವಜವು ಸಿಂಹ ಮತ್ತು ಸೂರ್ಯನನ್ನು ಒಳಗೊಂಡಿತ್ತು, ನಂತರ 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಅದನ್ನು ಹಸಿರು, ಬಿಳಿ ಮತ್ತು ಕೆಂಪು ಧ್ವಜಕ್ಕೆ ಬದಲಾಯಿಸಲಾಯಿತು. ಹಿರಿಯ ಕ್ರೀಡಾ ಪತ್ರಕರ್ತ ಟ್ರೇಸಿ ಹೋಮ್ಸ್ ಹೇಳಿಕೊಂಡಂತೆ, ದೇಶವನ್ನು ತೊರೆಯುವ ಮೊದಲು ರಾಷ್ಟ್ರಗೀತೆ ಹಾಡಲು ಮತ್ತು ಆಡಳಿತವನ್ನು ಮುಜುಗರಕ್ಕೀಡು ಮಾಡದಂತೆ ಸೂಚಿಸಲಾಗಿದ್ದರೂ ಆಟಗಾರರು ಅದನ್ನು ಹಾಡಲು ನಿರಾಕರಿಸಿದರು. ಇರಾನ್‌ನ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಕೋಚ್ ಮತ್ತು ಆಟಗಾರರು ನಿರಾಕರಿಸಿದರು.
ಪಂದ್ಯಕ್ಕೂ ಮುನ್ನ ಸ್ಪರ್ಧೆಯ ಕುರಿತು ಮಾತನಾಡಿದ ಇರಾನ್ ತರಬೇತುದಾರ ಮಾರ್ಜಿಯೆಹ್ ಜಾಫಾರಿ, "ಭಾರತದಲ್ಲಿ 2022 ರಲ್ಲಿ ಗುಂಪು ಸ್ವಲ್ಪ ಸುಲಭವಾಗಿತ್ತು. ಈಗ 2026 ರಲ್ಲಿ ನಾವು ಹೆಚ್ಚಿನ ಅನುಭವದೊಂದಿಗೆ ಪ್ರವೇಶಿಸುತ್ತಿದ್ದೇವೆ, ಆದರೆ ಗುಂಪು ಹೆಚ್ಚು ಕಠಿಣವಾಗಿದೆ. ಆದರೆ ಈ ಪಂದ್ಯಗಳಲ್ಲಿ ಇರಾನಿನ ಮಹಿಳೆಯರ ಸಾಮರ್ಥ್ಯವನ್ನು ತೋರಿಸಲು ನಾವು ಬಯಸುತ್ತೇವೆ" ಎಂದಿದ್ದರು.
ಈತನ್ಮಧ್ಯೆ, ಒಟ್ಟಾರೆಯಾಗಿ ಮತ್ತೊಂದು ಪರಿಸ್ಥಿತಿಯಲ್ಲಿ, ನಡೆಯುತ್ತಿರುವ ಬಿಕ್ಕಟ್ಟು ಈ ವರ್ಷದ ಜೂನ್-ಜುಲೈನಲ್ಲಿ ಯುಎಸ್ಎ, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಆಯೋಜಿಸಲಿರುವ ಫಿಫಾ ವಿಶ್ವಕಪ್ 2026 ರಲ್ಲಿ ಇರಾನ್ ಭಾಗವಹಿಸುವಿಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.