Womens Day 2026 | ಸರಸ್ವತಮ್ಮನಿಗೆ ಸೇವೆಯೇ ಕಾಯಕ
ಶ್ರೀರಂಗಪಟ್ಟಣ: ಹಿಡಿಯಷ್ಟು ಕೊಟ್ಟು ದೊಡ್ಡ ಪ್ರಚಾರ ಬಯಸುವವರ ನಡುವೆ ಪಟ್ಟಣದ ರಾಜ್ಯ ಸರ್ಕಾರಿ ನಿವೃತ್ತ ನೌಕರರೊಬ್ಬರು ಅಬಲೆಯರು, ಹಿಂದುಳಿದವರು ಮತ್ತು ಬಡ ವಿದ್ಯಾರ್ಥಿಗಳಿಗೆ ಉದಾರವಾಗಿ ನೆರವು ನೀಡುತ್ತಾ ನಿಷ್ಕಾಮ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಟ್ಟಣದ ಪಶ್ಚಿಮವಾಹಿನಿ ಬಡಾವಣೆ ನಿವಾಸಿ ಎನ್. ಸರಸ್ವತಿ (ಸರಸ್ವತಮ್ಮ) ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಏಳೆಂಟು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಅಂಗವಿಕಲೆಯರು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸ್ವಂತ ಹಣದಿಂದ ಹೊಲಿಗೆ ಯಂತ್ರ ಕೊಡಿಸಿ ಸ್ವಾವಲಂಬಿ ಜೀವನ ನಡೆಸಲು ನೆರವಾಗಿದ್ದಾರೆ.
ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ಕೊಡುತ್ತಾರೆ. ಜಿಲ್ಲೆಯ ವಿವಿಧ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳ ವಾಸಿಗಳಿಗೆ ತಮ್ಮ ಮಗಳ ಹುಟ್ಟು ಹಬ್ಬದ ನಿಮಿತ್ತ ಪ್ರತಿ ವರ್ಷ ಅಗತ್ಯ ಪರಿಕರಗಳನ್ನು ವಿತರಿಸುತ್ತಾರೆ. ಸಂಘ ಸಂಸ್ಥೆಗಳ ಜತೆಗೂಡಿ ಶ್ರೀರಂಗಪಟ್ಟಣ ಮತ್ತು ಮದ್ದೂರಿನಲ್ಲಿ ಮಹಿಳೆಯರಿಗೆ ಬ್ಯೂಟಿಷಿಯನ್ ಮತ್ತು ಟೈಲರಿಂಗ್ ಉಚಿತ ತರಬೇತಿ ಕೇಂದ್ರವನ್ನೂ ನಡೆಸುತ್ತಿದ್ದಾರೆ.
ಅಲಯನ್ಸ್ ಐಕ್ಯ ಸಂಸ್ಥೆಯ ಮೈಸೂರು ಪ್ರಾದೇಶಿಕ ಸಂಯೋಜಕಿ, ಕಾಮಧೇನು ಸ್ತ್ರೀ ಶಕ್ತಿ ಸಂಘದ ಉಪಾಧ್ಯಕ್ಷೆ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ರೋಟರಿ ಕ್ಲಬ್ ಖಜಾಂಚಿ, ರಂಗನಾಯಕಿ ಸ್ತ್ರೀ ಸಮಾಜದ ಸದಸ್ಯೆ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಕಸಾಪ ನಗರ ಘಟಕದ ಅಧ್ಯಕ್ಷರಾಗಿಯೂ ಇವರು ಕೆಲಸ ಮಾಡಿದ್ದಾರೆ.
ಎನ್‌ಎಂಎಂಎಸ್ (ರಾಷ್ಟ್ರೀಯ ಪ್ರತಿಭಾನ್ವೇಷಣಾ) ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಊಟೋಪಚಾರದ ವ್ಯವಸ್ಥೆ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ವಸ್ತ್ರ, ತಟ್ಟೆ, ಲೋಟ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುತ್ತಾ ಬಂದಿದ್ದಾರೆ. ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ನೂರಾರು ಗಿಡಗಳನ್ನು ನೆಟ್ಟು ನೀರೆರಿದ್ದಾರೆ. ‘ಸೇವೆಯೇ ಕಾಯಕ’ ಎಂದು ಭಾವಿಸಿರುವ ಸರಸ್ವತಮ್ಮ ತಮ್ಮ ಪಿಂಚಣಿ ಹಣದ ಅರ್ಧ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದು ಇತರರಿಗೆ ಮಾದರಿಯಾಗಿದ್ದಾರೆ.