ಗಾಲ್ಫ್ ಆಡ್ತಾರೆ, ಡ್ಯೂಟಿ ಮಾಡೋಕೆ ಟೈಂ ಇಲ್ಲ; 9 ತಿಂಗಳು ಕಚೇರಿಗೆ ಬಾರದ ಐಎಎಸ್, ಆರ್ ಅಶೋಕ್ ಗರಂ, ಯಾರು ಆ ಅಧಿಕಾರಿ?
ವಿಧಾನಸಭೆ (ಮಾ.17): ಸರ್ಕಾರದಲ್ಲಿ 8-9 ತಿಂಗಳಿಂದ ಕಚೇರಿಗೆ ಬಾರದ ಐಎಎಸ್ ಅಧಿಕಾರಿಗಳು ಇದ್ದಾರೆ. ಅವರ ಬಗ್ಗೆ ಹಾಜರಾತಿ ಸಹಿತ ದಾಖಲೆ ನೀಡುತ್ತೇನೆ. ಅಂತಹವರ ಮೇಲೆ ಕ್ರಮ ಆಗಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ವಿಧಾನಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಉತ್ತರ ಸಿಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿ, ಇವರಿಗೆ ಗಾಲ್ಫ್ ಆಡೋಕೆ ಸಮಯ ಇರುತ್ತದೆ. ಆದರೆ ಕಚೇರಿಗೆ ಬರಲು ಆಗಲ್ಲ. 8-9 ತಿಂಗಳಿಂದಲೂ ಕಚೇರಿಗೆ ಬಾರದ ಐಎಎಸ್ ಅಧಿಕಾರಿಗಳು ಇದ್ದಾರೆ. ಆ ಬಗ್ಗೆ ದಾಖಲೆ ಒದಗಿಸುತ್ತೇನೆ ಎಂದು ಹೇಳಿದರು. ಅಧಿವೇಶನದಲ್ಲಿ ಕಳೆದ ಒಂದು ವಾರದಿಂದ ಎಚ್ಚರಿಕೆ ನೀಡುತ್ತಿದ್ದೀರಿ. ಅಂತಿಮವಾಗಿ ಇಂದು ಬಿಸಿ ಮುಟ್ಟಿಸಿದ್ದೀರಿ. 2-3 ಮಂದಿಯನ್ನು ಅಮಾನತು ಮಾಡಬೇಕು. ಆಗ ಮಾತ್ರ ಇವರಿಗೆ ಬುದ್ದಿ ಬರುತ್ತದೆ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.