UAE ಬೇಸ್‌ನಲ್ಲಿದ್ದ 200 ಸಿಬ್ಬಂದಿಗಳ ಯುಎಸ್ ಕಮಾಂಡ್ ಸೆಂಟರ್ ಮೇಲೆ ಡ್ರೋನ್ ದಾಳಿ ಮಾಡಿದ ಇರಾನ್
ದುಬೈ (ಮಾ.31): ಕೊಲ್ಲಿ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಮಿತಿ ಮೀರಿದ್ದು, ಅಮೆರಿಕದ ನೌಕಾಪಡೆಯ ನಾಯಕತ್ವವನ್ನೇ ಗುರಿಯಾಗಿಸಿಕೊಂಡು ಇರಾನ್ ಭೀಕರ ಡ್ರೋನ್ ದಾಳಿ ನಡೆಸಿದೆ ಎಂದು ಇರಾನ್ ನೌಕಾಪಡೆ ಪ್ರತಿಪಾದಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಅಲ್ ಮಿನ್ಹಾದ್ ವಾಯುನೆಲೆಯ ಸಮೀಪವಿರುವ ಅಮೆರಿಕದ ಹಿರಿಯ ಕಮಾಂಡರ್‌ಗಳ ಸಭೆಯನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇರಾನ್ ನೌಕಾಪಡೆ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಅಲ್ ಮಿನ್ಹಾದ್ ವಾಯುನೆಲೆಯ ಹೊರಗಿರುವ ಅಮೆರಿಕ ಸೇನೆಯ 'ರಹಸ್ಯ ಕಮಾಂಡ್ ಸೆಂಟರ್' ಅನ್ನು ಇರಾನ್ ಗುಪ್ತಚರ ಇಲಾಖೆ ಪತ್ತೆಹಚ್ಚಿ ಧ್ವಂಸಗೊಳಿಸಿದೆ. ದಾಳಿ ನಡೆದ ಸಮಯದಲ್ಲಿ ಅಲ್ಲಿ ಸುಮಾರು 200 ಅಮೆರಿಕನ್ ಅಧಿಕಾರಿಗಳು ಮತ್ತು ಕಮಾಂಡರ್‌ಗಳು ಹಾಜರಿದ್ದರು ಎಂದು ಇರಾನ್ ಹೇಳಿಕೆ ನೀಡಿದೆ.
ಅಮೆರಿಕದ ಐದನೇ ನೌಕಾಪಡೆಯ (US Fifth Fleet) ಕಮಾಂಡರ್‌ಗಳು ಸಭೆ ಸೇರಿದ್ದ ತಾತ್ಕಾಲಿಕ ನಿವಾಸವನ್ನು ಗುರುತಿಸಿ, ಅತ್ಯಂತ ನಿಖರವಾಗಿ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿದೆ. ಅಲ್ಲದೆ, ಈ ಪ್ರದೇಶದಲ್ಲಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳು ಇನ್ನು ಮುಂದೆ ಹಿರಿಯ ಅಧಿಕಾರಿಗಳಿಗೆ ಸುರಕ್ಷಿತವಲ್ಲ ಎಂದು ಇರಾನ್ ಎಚ್ಚರಿಸಿದೆ. ಆದರೆ, ಈ ಬಗ್ಗೆ ಅಮೆರಿಕದ ಸೆಂಟ್ರಲ್ ಕಮಾಂಡ್‌ನಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಇರಾನ್‌ನ ಈ ದಾಳಿಗೂ ಕೆಲವು ಗಂಟೆಗಳ ಮೊದಲು, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಮಧ್ಯ ಇರಾನ್‌ನ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ವಾಯುವ್ಯ ಇರಾನ್‌ನ ಪ್ರಮುಖ ಧಾರ್ಮಿಕ ಕೇಂದ್ರವೊಂದು ಹಾನಿಗೊಳಗಾಗಿದ್ದು, ಇರಾನ್‌ನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇರಾನ್‌ನ ತೈಲ ಮತ್ತು ಇಂಧನ ಘಟಕಗಳನ್ನು ಸ್ಫೋಟಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿಗಳು ನಡೆದಿವೆ.