ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 96 ಸಾವಿರ ಹೊರಗುತ್ತಿಗೆ ನೌಕರರಿಗೆ ಸಂಕಷ್ಟ! ಒಪ್ಪಂದ ಮುಗಿದ್ರೆ ಹೊರ ಕಳಿಸಲು ಆದೇಶ
ಕರ್ನಾಟಕ ಸರ್ಕಾರವು ಹೊರ ಗುತ್ತಿಗೆ ನೌಕರರ ಅವಧಿ ಮುಗಿದ ಕೂಡಲೇ ಮನೆಗೆ ಕಳುಹಿಸುವಂತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಈ ಮೂಲಕ ಇಲಾಖೆಗಳ 96 ಸಾವಿರ ನೌಕರರಿಗೆ ಸಂಕಷ್ಟ ಎದುರಾಗಿದೆ. ಇನ್ನು ನೌಕರರನ್ನು ಮಾತ್ರವಲ್ಲದೇ, ಏಜೆನ್ಸಿಗಳನ್ನು ಕೈಬಿಡಲು ಸರ್ಕಾರ ಸೂಚನೆ ನೀಡಿದೆ. ಯಾವ ಇಲಾಖೆಯಲ್ಲಿ ಎಷ್ಟು ನೌಕರರು ಇದ್ದಾರೆ? ಸರ್ಕಾರದ ಆದೇಶದಲ್ಲಿ ಏನೆಲ್ಲಾ ಇದೆ? ಸಂಪೂರ್ಣ ವಿವರ ಇಲ್ಲಿದೆ. ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲ ಮಾಡುತ್ತಿರುವ 96 ಸಾವಿರ ಹೊರಗುತ್ತಿಗೆ ನೌಕರರಿಗೆ ಸಂಕಷ್ಟ ಎದುರಾಗಿದೆ. ಹೊರಗುತ್ತಿಗೆ ವ್ಯವಸ್ಥೆ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ನೌಕರರ ಜತೆ ಏಜೆನ್ಸಿಗಳು ಮಾಡಿಕೊಂಡಿರುವ ಒಪ್ಪಂದ ಮುಗಿದ ಕೂಡಲೇ ಅವರನ್ನು ಕೆಲಸದಿಂದ ಬಿಡುಗಡೆ ಮಾಡಲು ಇಲಾಖೆಗಳಿಗೆ ಸರ್ಕಾರ ಆದೇಶ ಹೊರಡಿಸಲಾಗಿದೆ. ಜತೆಗೆ ಗುತ್ತಿಗೆ ಅಥವಾ ಟೆಂಡರ್ ಅವಧಿ ಮುಗಿದ ಕೂಡಲೇ ಏಜೆನ್ಸಿಗಳನ್ನು ಕೈಬಿಡಲು ಸೂಚನೆ ನೀಡಲಾಗಿದೆ. ಸರ್ಕಾರವು ಹೊರಗುತ್ತಿಗೆ ನೇಮಕಾತಿಯನ್ನು 2028ರ ವೇಳೆಗೆ ಸಂಪೂರ್ಣ ರದ್ದುಗೊಳಿಸಲು ಗುರಿ ಇಟ್ಟುಕೊಂಡಿದೆ. ಜತೆಗೆ 56 ಸಾವಿರ ಹುದ್ದೆಗಳನ್ನು ಭರ್ತಿಗೆ ನಿರ್ಧರಿಸಲಾಗಿದೆ. ಹೀಗಾಗಿಯೇ, ಗುತ್ತಿಗೆ ನೌಕರರ ಭಾರ ಇಳಿಸಿಕೊಳ್ಳಲು ಮುಂದಾಗಿದೆ. ಜತೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳಲ್ಲಿ ಟೆಂಡರ್ ಅಥವಾ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿ ಹೊರಗುತ್ತಿಗೆ ಸಿಬ್ಬಂದಿಯನ್ನು ನಿಗದಿತ ಅವಧಿ ಮುಗಿದ ನಂತರವೂ ಮುಂದುವರಿಸಲಾಗುತ್ತಿದೆ. ಇದು ಆರ್ಥಿಕ ಹೊರೆ ಉಂಟು ಮಾಡಲಿದ್ದು, ಇದರಿಂದ ಮುಕ್ತಿಗೂ ಈ ನಿರ್ಧಾರ ಎನ್ನಲಾಗಿದೆ. (ಹೊರ ಗುತ್ತಿಗೆ ನೌಕರರ ಸಂಬಳ ಸಮಸ್ಯೆ)