ಯಾರೊಬ್ಬರಿಂದಲೂ ಪಕ್ಷ ನಡೆಯಲ್ಲ, ಪಕ್ಷದ ಸಿದ್ಧಾಂತವೇ ಮುಖ್ಯ: ಡಿಕೆ ಶಿವಕುಮಾರ್
ದಾವಣಗೆರೆ: ಕಾಂಗ್ರೆಸ್ ಸಿದ್ಧಾಂತದ ಮೇಲೆ ಚುನಾವಣೆ ನಡೆಯುತ್ತದೆಯೇ ಹೊರತು ವ್ಯಕ್ತಿಗಳ ಮೇಲಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ನಾವು ನೀಡಿರುವ ಗ್ಯಾರಂಟಿ ಯೋಜನೆಗಳ ಆಧಾರದ ಮೇಲೆ ಈ ಬಾರಿಯ ಚುನಾವಣೆ ನಡೆಯಲಿದೆ. ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ ಮತ್ತು ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಅಸ್ಸಾಂನಲ್ಲಿ ಎರಡು ದಿನಗಳ ಪ್ರಚಾರ ಮುಗಿಸಿ ಬಂದಿದ್ದೇನೆ. ಇಂದು ಮತ್ತು ನಾಳೆ ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದೇನೆ. ತದನಂತರ ಕೇರಳ ಹಾಗೂ ಅಸ್ಸಾಂಗೆ ಮತ್ತೆ ಭೇಟಿ ನೀಡಲಿದ್ದೇನೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ಎಲ್ಲರೂ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದ ಕೆಲವು ಅಸಮಾಧಾನದ ವಿಚಾರಗಳಿಗೆ ನಾವು ತೆರೆ ಎಳೆದಿದ್ದೇವೆ. ಕಾಂಗ್ರೆಸ್ ಪಕ್ಷವು ಎಲ್ಲ ಸಮಾಜ ಮತ್ತು ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಸಚಿವ ಜಮೀರ್ ಅಹಮದ್ ಅವರ ಅಸಮಾಧಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಜಮೀರ್ ಅವರಿಗೆ ಕೇರಳದಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಅವರು ನಮ್ಮ ಸ್ಟಾರ್ ಪ್ರಚಾರಕರು. ಅಲ್ಲಿನ ಕೆಲಸ ಮುಗಿಸಿ ಅವರು ಇಲ್ಲಿಗೆ ಬರಲಿದ್ದಾರೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅಥವಾ ಜಮೀರ್ ಯಾರೊಬ್ಬರ ಮೇಲೂ ಪಕ್ಷ ನಡೆಯುವುದಿಲ್ಲ. ಪಕ್ಷದ ಸಿದ್ಧಾಂತವೇ ನಮಗೆ ಮುಖ್ಯ ಎಂದರು.