ನಾನು ಸಾಲರಾಮಯ್ಯ ಅಲ್ಲ, ನಾನು ಅನ್ನದ ರಾಮಯ್ಯ; ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ದಾವಣಗೆರೆ (ಏ.2): ‘ನಾನು ಸಾಲದ ರಾಮಯ್ಯ ಅಲ್ಲ. ಅನ್ನದ ರಾಮಯ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಬಿ.ವೈ.ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ರೋಡ್ ಶೋ ನಡೆಸಿ ಅವರು ಮಾತನಾಡಿದರು. ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ. ನಾವು ಬಡವರ ಪರ ಇರುವವರು.
ಎಲ್ಲ ವರ್ಗದ ಜನರ ಪರ ನಿಲ್ಲುವವರು ಎಂದರು.
ನಾನು ಅನ್ನದ ರಾಮಯ್ಯನೇ ಹೊರತು, ಸಾಲದ ರಾಮಯ್ಯ ಅಲ್ಲ. ಬಿಜೆಪಿ ಸರ್ಕಾರ ಮಾರ್ಚ್ 2023ರವರೆಗೆ ₹5,30,000 ಕೋಟಿಗೂ ಅಧಿಕ ಸಾಲ ಮಾಡಿದ್ದರೆ, ನಮ್ಮ ಸರ್ಕಾರ 4 ವರ್ಷದಲ್ಲಿ ₹2.56 ಲಕ್ಷ ಕೋಟಿ ಸಾಲ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷಗಳ ಅಧಿಕಾರದ ಅವಧಿಯಲ್ಲಿ ₹165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ದೇಶದ ಮೇಲೆ ₹53.11 ಲಕ್ಷ ಕೋಟಿ ಸಾಲ ಇತ್ತು. ಈಗ ₹218 ಲಕ್ಷ ಕೋಟಿಯಷ್ಟು ಸಾಲ ಇದೆ ಎಂದರು.