ಪ್ರಧಾನಿ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಅಹಂಕಾರಿಗಳು: ರಾಹುಲ್ ಆರೋಪ
ತ್ರಿಶ್ಶೂರ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್ 'ಅಹಂಕಾರಿಗಳು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. 'ಅವರು ಜನರೊಂದಿಗೆ ಬೆರೆತು ಕೆಲಸ ಮಾಡುವ ಬದಲಾಗಿ, ಜನರನ್ನು ತುಳಿದು ರಾಜನಂತೆ ಅಧಿಕಾರ ನಡೆಸುವ ಮನಸ್ಥಿತಿಯನ್ನು ಹೊಂದಿದ್ದಾರೆ' ಎಂದು ಆರೋಪಿಸಿದ್ದಾರೆ.
ಕೇರಳದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್, 'ಎಲ್‌ಡಿಎಫ್ ಮತ್ತು ಬಿಜೆಪಿಯ ಸಂಯೋಜಿತ ಶಕ್ತಿಯನ್ನು ಯುಡಿಎಫ್ ಎದುರಿಸುತ್ತಿದೆ' ಎಂದು ಹೇಳಿದ್ದಾರೆ.
'ಕೇರಳ ಹಾಗೂ ಇಡೀ ದೇಶದಲ್ಲಿ ಕಾಂಗ್ರೆಸ್ ಹಾಗೂ ಯುಡಿಎಫ್ ಅನ್ನು ತನ್ನ ಎದುರಾಳಿಯಾಗಿ ಬಿಜೆಪಿ ಪರಿಗಣಿಸುತ್ತದೆ. ಮತ್ತೊಂದೆಡೆ ಎಲ್‌ಡಿಎಫ್ ಕೇಸರಿ ಪಡೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ' ಎಂದು ಆರೋಪಿಸಿದ್ದಾರೆ.
'ಪ್ರಧಾನಿ ಮೋದಿ ಎಲ್ಲ ಕಡೆಗಳಲ್ಲಿ ದೇವರು, ಧರ್ಮದ ಬಗ್ಗೆ ಮಾತನಾಡುತ್ತಾರೆ. ಆದರೆ ಕೇರಳದಲ್ಲಿ ಶಬರಿಮಲೆ ವಿಷಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಏಕೆಂದರೆ ಸಿಎಂ ಪಿಣರಾಯಿ ಹಾಗೂ ಸಿಪಿಐ(ಎಂ) ಪಕ್ಷವನ್ನು ರಕ್ಷಿಸಲು ಬಯಸುತ್ತಾರೆ' ಎಂದಿದ್ದಾರೆ.
'ಬಿಜೆಪಿ ಮೇಲೆ ಆರೋಪ ಮಾಡುವ ಎಲ್ಲರನ್ನು ಗುರಿಯಾಗಿಸಲಾಗಿದೆ. ಆದರೆ ಮುಖ್ಯಮಂತ್ರಿ ಹಾಗೂ ಅವರ ಕುಟುಂಬವನ್ನು ಮುಟ್ಟುವುದಿಲ್ಲ. ಅವರ ವಿರುದ್ಧ ಯಾವುದೇ ವಿಚಾರಣೆ, ಇ.ಡಿ ಅಥವಾ ಸಿಬಿಐ ಕ್ರಮ ಕೈಗೊಂಡಿಲ್ಲ' ಎಂದು ಹೇಳಿದ್ದಾರೆ.
'ಕೇರಳವನ್ನು ಏಕಾಂಗಿಯಾಗಿ ಆಳಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜನಲ್ಲ. ಕೇರಳದಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಪ್ರತಿಭಾನ್ವಿತರಿದ್ದಾರೆ' ಎಂದು ರಾಹುಲ್ ಉಲ್ಲೇಖಿಸಿದ್ದಾರೆ.
'ಎಲ್‌ಡಿಎಫ್ ಚುನಾವಣಾ ಘೋಷವಾಕ್ಯ ದುರಂಹಕಾರದ ಪರಮಾವಧಿಯಾಗಿದೆ. ಜನರಿಗೆ ಅಗೌರವ ತೋರಲಾಗಿದೆ' ಎಂದು ದೂರಿದ್ದಾರೆ.