ನಾನು ಟ್ರಂಪ್ ಆಡಳಿತಕ್ಕೆ ಹೆದರಲ್ಲ: ಜಾಗತಿಕ ಶಾಂತಿಗೆ ಕರೆಕೊಟ್ಟ ಪೋಪ್ ಲಿಯೊ
ಅಲ್ಜೀರ್ಸ್ (ಅಲ್ಜೇರಿಯಾ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದೊಂದಿಗೆ ಯಾವುದೇ ಮುಖಾಮುಖಿ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಇಚ್ಛೆ ನನಗಿಲ್ಲ ಎಂದು ಹೇಳಿರುವ ಪೋಪ್ 14ನೇ ಲಿಯೊ, ರಾಜಕೀಯ ಘರ್ಷಣೆಗಿಂತ ಆಧ್ಯಾತ್ಮಿಕ ವಕಾಲತ್ತಿಗೆ ಹೆಚ್ಚು ಬದ್ಧತೆ ಹೊಂದಿರುವುದಾಗಿ ಪುನರುಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಓದುವ ಜನರು ತಮ್ಮದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಶಕ್ತರಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ರಾಜಕಾರಣಿಯಲ್ಲ. ಹಾಗಾಗಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚೆಗೆ ಇಳಿಯುವ ಉದ್ದೇಶವು ನನಗಿಲ್ಲ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
‘ಜಾಗತಿಕ ಸಾಮರಸ್ಯದ ಮೇಲೆ ಗಮನ ಕೇಂದ್ರೀಕರಿಸುವ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದ ಅವರು, ನಾವು ಯಾವಾಗಲೂ ಶಾಂತಿಯನ್ನು ಹುಡುಕೋಣ, ಯುದ್ಧಗಳನ್ನು ಕೊನೆಗೊಳಿಸೋಣ.
ನಾನು ಟ್ರಂಪ್ ಆಡಳಿತಕ್ಕೆ ಹೆದರುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.
‘ಯುದ್ಧ ವಿರೋಧಿಸಿ ನಾನು ಗಟ್ಟಿಯಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ. ಶಾಂತಿ ಮತ್ತು ರಾಷ್ಟ್ರಗಳ ನಡುವೆ ಬಹುಪಕ್ಷೀಯ ಸಂವಾದವನ್ನು ಉತ್ತೇಜಿಸಲು ಪ್ರಯತ್ನಿಸುತ್ತೇನೆ. ಇದರಿಂದ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕಂಡುಕೊಳ್ಳಬಹುದು’ ಎಂದಿದ್ದಾರೆ.
‘ಚರ್ಚ್‌ನ ಸಂದೇಶವು ಸುವಾರ್ತೆಯ ಸಂದೇಶವಾಗಿದೆ. ಶಾಂತಿ ಸ್ಥಾಪಿಸುವವರು ಧನ್ಯರು. ನನ್ನ ಪಾತ್ರವನ್ನು ನಾನು ರಾಜಕಾರಣಿಯ ಪಾತ್ರವೆಂದು ನೋಡುವುದಿಲ್ಲ. ಅವರೊಂದಿಗೆ (ಟ್ರಂಪ್) ಚರ್ಚೆಗೆ ಇಳಿಯಲು ನಾನು ಬಯಸುವುದಿಲ್ಲ. ಜಗತ್ತಿನಲ್ಲಿ ಈಗಾಗಲೇ ಅತೀ ಹೆಚ್ಚು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.