Select Location
All Locations
State
Region
City / District
... SMACY
ಯಾವುದೇ ರಾಷ್ಟ್ರಕ್ಕೆ ತೈಲ ಮಾರಾಟ ಮಾಡಲು ಸಿದ್ಧ: ಭಾರತಕ್ಕೆ ಇರಾನ್

ಯಾವುದೇ ರಾಷ್ಟ್ರಕ್ಕೆ ತೈಲ ಮಾರಾಟ ಮಾಡಲು ಸಿದ್ಧ: ಭಾರತಕ್ಕೆ ಇರಾನ್

ಟೆಹರಾನ್‌: ತನ್ನಲ್ಲಿರುವ ತೈಲವನ್ನು ಯಾವುದೇ ರಾಷ್ಟ್ರಕ್ಕೆ ಮಾರಾಟ ಮಾಡಲು ಸಿದ್ಧವಿರುವುದಾಗಿ ಭಾರತಕ್ಕೆ ಇರಾನ್ ಸೋಮವಾರ ಹೇಳಿದೆ. ಭಾರತಕ್ಕೆ ಇರಾನ್‌ ರಾಯಭಾರಿಯಾಗಿರುವ ಡಾ. ಮೊಹಮ್ಮದ್‌ ಫತಾಲಿ ಅವರು ಈ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆಯು ಜಾಗತಿಕ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಿದೆ. ಇಸ್ರೇಲ್‌ ಹಾಗೂ ಅಮೆರಿಕ ಸೇನೆಗಳು ಇರಾನ್‌ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ಆ ವೇಳೆ, ಇರಾನ್‌ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವರು ಹತ್ಯೆಯಾದರು.
ಇದರಿಂದ ಕೆರಳಿರುವ ಇರಾನ್‌, ಪ್ರತಿದಾಳಿ ಆರಂಭಿಸಿತ್ತು. ಇಸ್ರೇಲ್‌, ಅಮೆರಿಕ ವಿರುದ್ಧವಷ್ಟೇ ಅಲ್ಲದೆ, ಅವುಗಳ ಮಿತ್ರ ರಾಷ್ಟ್ರಗಳತ್ತಲೂ ಕ್ಷಿಪಣಿ, ಡ್ರೋನ್‌ಗಳ ಮೂಲಕ ದಾಳಿ ಮಾಡಿತ್ತು. ಮಾತ್ರವಲ್ಲದೆ, ತೈಲ ಸರಬರಾಜಿನ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್‌ ಮೇಲೆ ನಿಯಂತ್ರಣ ಸಾಧಿಸಿ, ಜಗತ್ತಿನಾದ್ಯಂತ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವಂತೆ ಮಾಡಿದೆ. ಆ ಮೂಲಕ ಅಮೆರಿಕದ ಮೇಲೆ ಒತ್ತಡ ಸೃಷ್ಟಿಸಿತ್ತು. ತೈಲ ಅಭಾವದಿಂದಾಗಿ ಆಹಾರ ಬೆಲೆಗಳೂ ಗಗನಮುಖಿಯಾಗಿವೆ. ಇದರಿಂದಾಗಿ, ಯುದ್ಧ ಕೊನೆಗೊಳಿಸುವಂತೆ ಅಂತರರಾಷ್ಟ್ರೀಯ ಸಮುದಾಯ ಕರೆ ನೀಡಿದೆ. ಏತನ್ಮಧ್ಯೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಹಾಗೂ ಇರಾನ್‌ ಎರಡು ವಾರಗಳ ಮಟ್ಟಿಗೆ ಕದನ ವಿರಾಮ ಘೋಷಿಸಿದ್ದವು.

 ನಂತರ, ಎರಡೂ ರಾಷ್ಟ್ರಗಳ ನಿಯೋಗಗಳು ಇಸ್ಲಾಮಾಬಾದ್‌ನಲ್ಲಿ ಸಭೆ ಸೇರಿ ಶಾಂತಿ ಸ್ಥಾಪನೆ ಕುರಿತು ಚರ್ಚಿಸಿದ್ದವು. ಆದರೆ, ಮಾತುಕತೆ ಯಶಸ್ವಿಯಾಗಿಲ್ಲ. ಅದರ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೊರ್ಮುಜ್‌ನಲ್ಲಿ ಸಂಚರಿಸುವ ಹಡಗುಗಳನ್ನು ನಿರ್ಬಂಧಿಸುವುದಾಗಿ ಮತ್ತು ಜಲಸಂಧಿಯ ಮೇಲೆ ದಿಗ್ಬಂಧನ ಹೇರುವುದಾಗಿ ಎಚ್ಚರಿಕೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಇರಾನ್‌, ಕೂಡ ಬೆದರಿಕೆಯೊಡ್ಡಿದೆ. ಹೊರ್ಮುಜ್‌ಗೆ ದಿಗ್ಬಂಧನ ಹೇರಿದರೆ ಒಮಾನ್‌ ಹಾಗೂ ಪರ್ಷಿಯಾ ಕೊಲ್ಲಿಯ ಯಾವುದೇ ಬಂದರು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದು ಹೇಳಿದೆ. ಈ ಬೆಳವಣಿಗೆಗಳ ನಡುವೆಯೇ, ಫತಾಲಿ ಹೇಳಿಕೆ ಹೊರಬಿದ್ದಿದೆ.

Source : Prajavani

20 hours ago

Home Flash News