ವನಿತಾ ಟಿ20 ವಿಶ್ವಕಪ್ ಬಹುಮಾನ ಮೊತ್ತ 82 ಕೋಟಿ ರೂ.!
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ಮೊತ್ತವನ್ನು 82 ಕೋಟಿ ರೂ.ಗೆ ಏರಿಸಿದೆ.
ಇದು 2024ರ ಬಹುಮಾನ ಮೊತ್ತಕ್ಕಿಂತ ಶೇ. 10ರಷ್ಟು ಹೆಚ್ಚಳ ಹಾಗೂ ನೂತನ ದಾಖಲೆಯಾಗಿದೆ. ಕಳೆದ ಸಲ ಇದು 74 ಕೋಟಿ ರೂ. ಆಗಿತ್ತು.
ಚಾಂಪಿಯನ್ ತಂಡ 21.8 ಕೋಟಿ ರೂ., ರನ್ನರ್ಸ್ ಆಪ್ ತಂಡ 10 ಕೋಟಿ ರೂ., ಸೆಮಿಫೈನಲ್ ನಲ್ಲಿ ಸೋತ ತಂಡಗಳು ತಲಾ 6.29 ಕೋಟಿ ರೂ. ಪಡೆದರೆ, ಗ್ರೂಪ್ ಹಂತದ ವಿಜೇತ ತಂಡಕ್ಕೆ ತಲಾ 29 ಲಕ್ಷ ರೂ. ಬಹುಮಾನ ಸಿಗಲಿದೆ. ಪಾಲ್ಗೊಳ್ಳಲಿರುವ ಪ್ರತಿಯೊಂದು ತಂಡಕ್ಕೂ ಅಂದಾಜು 2.06 ಕೋಟಿ ರೂ. ಸಿಗಲಿದೆ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಈ ಬಾರಿಯ ವನಿತಾ ಟಿ20 ವಿಶ್ವಕಪ್ ಪಂದ್ಯಾವಳಿ ಜೂ. 12ರಿಂದ ಜು. 5ರ ತನಕ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯಲಿದೆ. ತಂಡಗಳ ಸಂಖ್ಯೆ 10ರಿಂದ 12ಕ್ಕೆ ಏರಿಕೆಯಾಗಿದೆ.
24 ದಿನಗಳ ಅಂತರದಲ್ಲಿ ಒಟ್ಟು 33 ಪಂದ್ಯಗಳನ್ನು ಆಡಲಾಗುವುದು. ಜೂ. 12ರ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಶ್ರೀಲಂಕಾ ಮುಖಾಮುಖಿ ಆಗಲಿವೆ.
ತಂಡಗಳು: ಇಂಗ್ಲೆಂಡ್, ಆಸ್ಟ್ರೇಲಿಯ, ಭಾರತ, ಬಾಂಗ್ಲಾದೇಶ, ಐರ್ಲೆಂಡ್, ನೆದರ್ಲೆಂಡ್ಸ್, ನ್ಯೂಜಿಲ್ಯಾಂಡ್, ಪಾಕಿಸ್ಥಾನ, ಶ್ರೀಲಂಕಾ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್.