ವಿಪಕ್ಷಗಳ ಟೀಕೆಗೆ ಅಭಿವೃದ್ಧಿಯೇ ಉತ್ತರ: ಮುಖ್ಯಮಂತ್ರಿ ಸಿದ್ದರಾಮಯ್ಯ
ಪಿರಿಯಾಪಟ್ಟಣ ( ಮೈಸೂರು ಜಿಲ್ಲೆ): 'ವಿಪಕ್ಷಗಳ ಅನಗತ್ಯ ಟೀಕೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳೇ ಉತ್ತರ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಿರಿಯಾಪಟ್ಟಣದಲ್ಲಿ ಮಂಗಳವಾರ 419 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ' ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ನಿಂತಿಲ್ಲ. 4.48 ಲಕ್ಷ ವೆಚ್ಚದ ಬಜೆಟ್ ನಲ್ಲಿ 82 ಸಾವಿರ ಕೋಟಿ ಯನ್ನು ಅಭಿವೃದ್ಧಿ ಯೋಜನೆಗಳಿಗೆ ನೀಡಿದ್ದೇವೆ.
ಬಿಜೆಪಿಯವರು ತಾವು ಅಧಿಕಾರ ನಡೆಸಿದ ನಾಲ್ಕು ವರ್ಷದಲ್ಲಿ ಏನು ಮಾಡಿದ್ದೀವಿ ಎಂದು ಜನರ ಮುಂದೆ ಇಡಲಿ' ಎಂದು ಸವಾಲು ಹಾಕಿದರು. ' ನಮ್ಮದು ನುಡಿದಂತೆ ನಡೆಯುವ ಸರ್ಕಾರ. 2013-18ರಲ್ಲಿ 165 ಭರವಸೆ ಈಡೇರಿಸಿ, 30 ಹೊಸ ಕಾರ್ಯಕ್ರಮ ಕೊಟ್ಟಿದ್ದೆವು. ಕಳೆದ ಮೂರು ವರ್ಷದಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದಾಗ್ಯೂ ಸರ್ಕಾರದ ಖಜಾನೆ ಸುಭದ್ರವಾಗಿದೆ. ಮೂರು ವರ್ಷದಲ್ಲಿ 1.31 ಲಕ್ಷ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ' ಎಂದರು.