Select Location
All Locations
State
Region
City / District
ಪೊಲೀಸ್‌ ಅಧಿಕಾರಿ ʼಸಿಂಗಂʼ ಆಗಿದ್ರೆ, ನಾನು ʼಪುಷ್ಪʼ: ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಕಿಡಿ

ಪೊಲೀಸ್‌ ಅಧಿಕಾರಿ ʼಸಿಂಗಂʼ ಆಗಿದ್ರೆ, ನಾನು ʼಪುಷ್ಪʼ: ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಕಿಡಿ

ಕೋಲ್ಕತ್ತ: ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಬಾಕಿ ಇದೆ. ಈ ನಡುವೆ ಚುನಾವಣಾ ಆಯೋಗದಿಂದ ನಿಯೋಜನೆಗೊಂಡಿರುವ ಉತ್ತರ ಪ್ರದೇಶ ಕೇಡರ್‌ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಅವರ ಬೆಂಬಲಿಗರು ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸುತ್ತಿದ್ದಾರೆ. ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ದೂರು ಚುನಾವಣಾ ಆಯೋಗಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿರುವ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಸೋಮವಾರ ತಡರಾತ್ರಿ ಅಭ್ಯರ್ಥಿಯ ನಿವಾಸ ಹಾಗೂ ಕಚೇರಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದರು.

ಸಿನಿಮಾ ಶೈಲಿಯಲ್ಲಿ ಸವಾಲು ಉತ್ತರ ಪ್ರದೇಶದಲ್ಲಿ ‘ಸಿಂಗಂ’ (ಧೈರ್ಯಶಾಲಿ) ಎಂದೇ ಖ್ಯಾತಿ ಗಳಿಸಿರುವ ಐಪಿಎಸ್‌ ಅಧಿಕಾರಿ ಶರ್ಮಾ ಅವರು, ‘ಅಭ್ಯರ್ಥಿ ಅಥವಾ ಅವರ ಸಹಚರರು ಮತದಾರರನ್ನು ಹೆದರಿಸಲು ಬಿಡುವುದಿಲ್ಲ’ ಎಂದು ಹೇಳಿದ್ದರು. ಅಜಯ್ ಪಾಲ್ ಶರ್ಮಾ ಅವರ ಭೇಟಿಗೆ ಆಕ್ರೋಶ ವ್ಯಕ್ತಪಡಿಸಿದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್, ಸಿನಿಮಾ ಶೈಲಿಯಲ್ಲಿಯೇ ತಿರುಗೇಟು ನೀಡಿದ್ದಾರೆ. 'ಇದು ಬಂಗಾಳ. ಅವರು ಒಂದು ವೇಳೆ 'ಸಿಂಗಂ' ಆಗಿದ್ದರೆ, ನಾನು 'ಪುಷ್ಪ'. ಉತ್ತರ ಪ್ರದೇಶದಿಂದ ಬಂದಿರುವ ಬಿಜೆಪಿ ನೇಮಿತ ಪೊಲೀಸ್ ಅಧಿಕಾರಿಗಳ ಯಾವುದೇ ಬೆದರಿಕೆ ಅಥವಾ ಒತ್ತಡ ಫಾಲ್ಟಾದಲ್ಲಿ ಅವಕಾಶವೂ ನೀಡಲ್ಲ, ಇಲ್ಲಿಯೂ ನಡೆಯುವುದಿಲ್ಲʼ ಎಂದು ಗುಡುಗಿದ್ದಾರೆ.

ಟಿಎಂಸಿ ನಾಯಕರ ಆಕ್ರೋಶ ಈ ಬೆಳವಣಿಗೆಯನ್ನು ಪಶ್ಚಿಮ ಬಂಗಾಳದ ಸಚಿವರು ಮತ್ತು ಹಿರಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸ್‌ ಅಧಿಕಾರಿ ಶರ್ಮಾ ಅವರು ಟಿಎಂಸಿ ನಾಯಕರು, ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಮಾಧ್ಯಮಗಳು ಇವರನ್ನು 'ಎನ್‌ಕೌಂಟರ್ ಸ್ಪೆಷಲಿಸ್ಟ್' ಎನ್ನುತ್ತವೆ. ರಾತ್ರಿ ವೇಳೆ ಮನೆಗೆ ನುಗ್ಗಿ ಬೆದರಿಕೆ ಹಾಕಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಶಾಂತಿ ಕದಡಲು ಇವರನ್ನು ಕರೆತರಲಾಗಿದೆಯೇ? ಎಂದು ಚಂದ್ರೀಮಾ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ. ವೀಕ್ಷಕರು ತಟಸ್ಥವಾಗಿರಬೇಕು. ಸಂವಿಧಾನದ ಮಿತಿ ಮೀರಿ ಒಂದು ಪಕ್ಷವನ್ನು ಗುರಿಪಡಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅರೂಪ್ ಬಿಸ್ವಾಸ್ ಎಚ್ಚರಿಸಿದ್ದಾರೆ.


Udayavani 1 hour ago
Home Flash News