Modi Special Gift: ಭಾರತಕ್ಕೆ ವಿಯೆಟ್ನಾಂ ಅಧ್ಯಕ್ಷರ ಭೇಟಿ, ಮೋದಿಯಿಂದ ಸಿಕ್ತು ವಿಶೇಷ ಉಡುಗೊರೆ!
ಭಾರತ-ವಿಯೆಟ್ನಾಂ ದೇಶಗಳ (India Vietnam Relation) ನಡುವಿನ ಸ್ನೇಹ ಮತ್ತು ಆತ್ಮೀಯತೆಯನ್ನು ಮತ್ತಷ್ಟು ಗಟ್ಟಿಯಾಗುವತ್ತ ಸಾಗುತ್ತಿದೆ. ವಿಯೆಟ್ನಾಂ ಅಧ್ಯಕ್ಷ ತೋ ಲ್ಯಾಮ್ ಇತ್ತೀಚೆಗೆ ಭಾರತಕ್ಕೆ ಬಂದಿದ್ದಾರೆ. ಅವರು ಮೊದಲು ಬಿಹಾರ ರಾಜ್ಯದ ಪವಿತ್ರ ತೀರ್ಥಕ್ಷೇತ್ರವಾದ ಬೋಧಗಯಕ್ಕೆ ತೆರಳಿ ತಮ್ಮ ಭಾರತ ಪ್ರವಾಸವನ್ನು ಆರಂಭಿಸಿದರು. ಬೋಧಗಯವು ಬುದ್ಧ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು ಎನ್ನಲಾಗಿದೆ. ಇಲ್ಲಿ ಬುದ್ಧರಿಗೆ ಜ್ಞಾನೋದಯ ಸಂಭವಿಸಿತು ಎಂದು ನಂಬಲಾಗಿದೆ.
ಈ ಕಾರಣದಿಂದ, ಭಾರತ ಮತ್ತು ವಿಯೆಟ್ನಾಂ ದೇಶಗಳ ನಡುವೆ ಇರುವ ಆಧ್ಯಾತ್ಮಿಕ ಬಾಂಧವ್ಯವನ್ನು ತೋರಿಸಲು ಬೋಧಗಯದಿಂದಲೇ ಭೇಟಿಯನ್ನು ಪ್ರಾರಂಭಿಸಿರುವುದು ವಿಶೇಷ ಅರ್ಥ ಹೊಂದಿದೆ. ಇದು ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳ ನಂತರದ ಭೇಟಿಯಾಗಿದೆ. ವಿಯೆಟ್ನಾಂ ಅಧ್ಯಕ್ಷರಿಗೆ ಮೋದಿ ವಿಶೇಷ ಉಡುಗೊರೆ ಬೋಧಗಯಾದ ನಂತರ ವಿಯೆಟ್ನಾಂ ಅಧ್ಯಕ್ಷ ತೋ ಲ್ಯಾಮ್ ದೆಹಲಿಗೆ ಆಗಮಿಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭಗಳಲ್ಲಿ, ಭಾರತದ ಪರಂಪರೆ, ಸಂಸ್ಕೃತಿ ಮತ್ತು ಆಧುನಿಕ ಸಾಧನೆಗಳನ್ನು ಪ್ರತಿಬಿಂಬಿಸುವ ಹಲವು ಅಮೂಲ್ಯ ಉಡುಗೊರೆಗಳನ್ನು ಪ್ರಧಾನಿ ಮೋದಿ ವಿಯೆಟ್ನಾಂ ಅಧ್ಯಕ್ಷರಿಗೆ ನೀಡಿದರು. ಅವುಗಳಲ್ಲಿ ಮುಖ್ಯವಾಗಿ ‘ನಮೋ 108’ ಕಮಲ, ಬನಾರಸಿ ರೇಷ್ಮೆ ಬಟ್ಟೆ ಮತ್ತು ಬುದ್ಧನ ಹಿತ್ತಾಳೆಯ ಪ್ರತಿಮೆಗಳು ಸೇರಿವೆ.
ಮೊದಲನೆಯದಾಗಿ ‘ನಮೋ 108’ ಕಮಲದ ಬಗ್ಗೆ ಮಾತನಾಡಬೇಕಾದರೆ, ಇದು ಸಾಮಾನ್ಯ ಕಮಲವಲ್ಲ. ಉತ್ತರ ಪ್ರದೇಶದ ಲಕ್ನೋದಲ್ಲಿರುವ ರಾಷ್ಟ್ರೀಯ ಸಸ್ಯಶಾಸ್ತ್ರ ಸಂಶೋಧನಾ ಸಂಸ್ಥೆ ಇದನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿದೆ. ಈ ಕಮಲದಲ್ಲಿ ನಿಖರವಾಗಿ 108 ದಳಗಳು ಇರುತ್ತವೆ. 108 ಎಂಬ ಸಂಖ್ಯೆ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ಪವಿತ್ರ ಸಂಖ್ಯೆಯಾಗಿ ಪರಿಗಣಿಸಲ್ಪಟ್ಟಿದೆ. ಮಾಲೆಗಳಲ್ಲಿ, ಜಪಮಾಲೆಗಳಲ್ಲಿ ಮತ್ತು ವಿಧಿವಿಧಾನಗಳಲ್ಲಿ 108 ಸಂಖ್ಯೆಗೆ ಮಹತ್ವವಿದೆ. ಈ ಕಮಲವು ಭಾರತದ ಆಧುನಿಕ ವೈಜ್ಞಾನಿಕ ಸಂಶೋಧನೆ ಮತ್ತು ನಮ್ಮ ಧಾರ್ಮಿಕ-ಆಧ್ಯಾತ್ಮಿಕ ಪರಂಪರೆಯನ್ನು ಒಟ್ಟುಗೂಡಿಸುವ ಸುಂದರ ಉದಾಹರಣೆಯಾಗಿದೆ. ಈ ಕಾರಣದಿಂದಲೇ ಪ್ರಧಾನಿ ಮೋದಿ ಅವರು ಇದನ್ನು ತೋ ಲ್ಯಾಮ್ ಅವರಿಗೆ ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ.
ಇನ್ನೂ ವಿಯೆಟ್ನಾಂ ಅಧ್ಯಕ್ಷರಿಗೆ ನೀಡಲಾದ ಬನಾರಸಿ ರೇಷ್ಮೆ ಬಟ್ಟೆಯನ್ನು ನೋಡಿದರೆ, ಇದು ಉತ್ತರ ಪ್ರದೇಶದ ವಾರಣಾಸಿ (ಬನಾರಸ್) ನಗರದಿಂದ ಬಂದಿದೆ. ಬನಾರಸಿ ರೇಷ್ಮೆ ವಿಶ್ವವಿಖ್ಯಾತ. ಶತಮಾನಗಳಿಂದ ಇಲ್ಲಿನ ಜೂಲಿಗಳಲ್ಲಿ ತಯಾರಾಗುವ ಸೀರೆಗಳು, ಬ್ರೊಕೇಡ್‌ಗಳು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ, ಕಲೆಗಾರರ ಕುಶಲತೆ ಮತ್ತು ರಾಜಮನೆತನದ ಔನ್ನತ್ಯವನ್ನು ತೋರಿಸುತ್ತಿವೆ. ಈ ಬಟ್ಟೆಯಲ್ಲಿ ಸುಂದರ ಜಾಕ್ವಾರ್ಡ್ ನೇಯ್ಗೆಯ ತಂತ್ರ ಬಳಕೆ ಇದೆ. ಟೋನ್-ಆನ್-ಟೋನ್ ವಿನ್ಯಾಸದಲ್ಲಿ ಹೂವಿನ ಹಾಗೂ ಬಳ್ಳಿಯ ಮಾದರಿಗಳನ್ನು ಹತ್ತಿರದಿಂದ ನೋಡಿದರೆ, ಅದರ ಸೂಕ್ಷ್ಮತೆ ಮತ್ತು ಕಲಾತ್ಮಕತೆ ಸ್ಪಷ್ಟವಾಗುತ್ತದೆ. ಈ ಉಡುಗೊರೆ ಮೂಲಕ ಭಾರತವು ತನ್ನ ಜವಳಿ ಪರಂಪರೆಯನ್ನು ವಿಯೆಟ್ನಾಂಗೆ ಪರಿಚಯಿಸುತ್ತಿದೆ.