ಮಹಿಳಾ ಟಿ20 ವಿಶ್ವಕಪ್: ನಿವೃತ್ತಿ ವಾಪಸ್ ಪಡೆದ ಶಬ್ನಿಮ್ ಇಸ್ಮಾಯಿಲ್
ಜೋಹಾನ್ಸ್‌ಬರ್ಗ್: ಮುಂಬರುವ ಮಹಿಳಾ ಟಿ20 ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾ ತಂಡವು ತನ್ನ ಪ್ರಬಲ ಪಡೆಯನ್ನು ಪ್ರಕಟಿಸಿದ್ದು, ಅನುಭವಿ ವೇಗಿ ಶಬ್ನಿಮ್ ಇಸ್ಮಾಯಿಲ್ ಅವರು ಅಚ್ಚರಿಯ ರೀತಿಯಲ್ಲಿ ನಿವೃತ್ತಿ ನಿರ್ಧಾರವನ್ನು ಹಿಂಪಡೆದು ತಂಡಕ್ಕೆ ಮರಳಿದ್ದಾರೆ. ಜೂನ್ 12ರಿಂದ ಜುಲೈ 5ರವರೆಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ (UK) ನಡೆಯಲಿರುವ ಈ ಟೂರ್ನಿಗೆ ಲಾರಾ ವೊಲ್ವಾರ್ಡ್ಟ್ ನಾಯಕತ್ವದ 15 ಸದಸ್ಯರ ತಂಡವನ್ನು ಮಂಗಳವಾರ ಘೋಷಿಸಲಾಗಿದೆ. ಅನುಭವಿ ವೇಗಿಯ ಬಲ 37 ವರ್ಷದ ಶಬ್ನಿಮ್ ಇಸ್ಮಾಯಿಲ್ 2023ರ ಫೆಬ್ರವರಿಯಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ, ದೇಶದ ಯುವ ಪೀಳಿಗೆಗೆ ಸ್ಫೂರ್ತಿಯಾಗುವ ಉದ್ದೇಶದಿಂದ ಅವರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
113 ಟಿ20 ಪಂದ್ಯಗಳನ್ನು ಆಡಿರುವ ಅವರು 123 ವಿಕೆಟ್ ಪಡೆಯುವ ಮೂಲಕ ರಾಷ್ಟ್ರೀಯ ದಾಖಲೆ ಹೊಂದಿದ್ದು, ಅವರ ಮರಳುವಿಕೆ ತಂಡದ ಬೌಲಿಂಗ್ ವಿಭಾಗಕ್ಕೆ ಆನೆ ಬಲ ತಂದಿದೆ. ಇವರೊಂದಿಗೆ ಅನುಭವಿಗಳಾದ ಮರಿಜಾನ್ನೆ ಕಪ್ ಮತ್ತು ಡೇನ್ ವ್ಯಾನ್ ನೀಕರ್ಕ್ ಕೂಡ ಗಾಯ ಹಾಗೂ ಅನಾರೋಗ್ಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಇತ್ತೀಚೆಗೆ ಭಾರತ ವಿರುದ್ಧದ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡದಲ್ಲಿ ಯುವ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಮಾಜಿ ಅಂಡರ್-19 ನಾಯಕಿ ಕಯ್ಲಾ ರೇನಿಕೆ ತಮ್ಮ ಮೊದಲ ಹಿರಿಯರ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ಅದ್ಭುತ ಬ್ಯಾಟಿಂಗ್ ಸರಾಸರಿ ಹೊಂದಿದ್ದ ಅವರು ಆಲ್‌ರೌಂಡರ್ ಆಗಿ ಗಮನ ಸೆಳೆದಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ವಿಕೆಟ್ ಕೀಪರ್ ಬ್ಯಾಟರ್ ಕರಾಬೊ ಮೆಸೊ ಕೂಡ ತಂಡಕ್ಕೆ ಮರಳಿದ್ದಾರೆ. ಭಾರತದ ವಿರುದ್ಧ ಮೊದಲ ಹಂತದ ಸೆಣಸಾಟ ಗ್ರೂಪ್ 1ರಲ್ಲಿ ಸ್ಥಾನ ಪಡೆದಿರುವ ದಕ್ಷಿಣ ಆಫ್ರಿಕಾ ತನ್ನ ಮೊದಲ ಪಂದ್ಯವನ್ನು ಜೂನ್ 13ರಂದು ಮ್ಯಾಂಚೆಸ್ಟರ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಆ ಬಳಿಕ ಪಾಕಿಸ್ತಾನ, ಭಾರತ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ತಂಡಗಳನ್ನು ಎದುರಿಸಲಿದೆ.