Khyber Pakhtunkhwa Blast: ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ! 9 ಮಂದಿ ಸ್ಥಳದಲ್ಲೇ ಸಾವಯ, 23 ಮಂದಿ ಗಂಭೀರ
ಕರಾಚಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಮಂಗಳವಾರ (ಮೇ 12, 2026) ಭಾರಿ ಬಾಂಬ್ ಸ್ಫೋಟ ಸಂಭವಿಸಿ (Khyber Pakhtunkhwa Blast) ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿ, 23 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ಭೀಕರ ಕೃತ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆಯಿಂದ ಪಾಕಿಸ್ತಾನದ ವಾಯುವ್ಯ ರಾಜ್ಯದಲ್ಲಿ ಅಸಿಮ್ ಮುನೀರ್ ಮತ್ತು ಶಹಬಾಜ್ ಷರೀಫ್ ಮತ್ತೊಮ್ಮೆ ಭದ್ರತಾ ಸವಾಲನ್ನು ಎದುರಿಸುತ್ತಿದ್ದಾರೆ ಅನ್ನೋದು ಗಮನಾರ್ಹ. ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಖೈಬರ್ ಪಖ್ತುಂಖ್ವಾದ ಲಕ್ಕಿ ಮಾರ್ವಾತ್ ಜಿಲ್ಲೆಯ ಮಾರುಕಟ್ಟೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಇಬ್ಬರು ಸಂಚಾರ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇತರ ಇಪ್ಪತ್ತಮೂರು ಜನರು ಗಾಯಗೊಂಡಿದ್ದಾರೆ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.
ಪೊಲೀಸರ ಪ್ರಕಾರ, ಮಾರುಕಟ್ಟೆಯಲ್ಲಿ ಜನದಟ್ಟಣೆ ಇದ್ದ ಸಮಯದಲ್ಲಿ ಸ್ಫೋಟಕಗಳನ್ನು ತುಂಬಿದ್ದ ಲೋಡರ್ ರಿಕ್ಷಾ ಸ್ಫೋಟಗೊಂಡಿದೆ. ಸ್ಫೋಟದ ನಂತರ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಮೃತರು ಮತ್ತು ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ನೌರಾಂಗ್ ಆಸ್ಪತ್ರೆಗೆ ಸಾಗಿಸಿದವು. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ ಎಂದು ಮೂಲಗಳು ತಿಳಿಸಿವೆ.
ಸ್ಫೋಟದ ನಂತರ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಲು ಪ್ರದೇಶವನ್ನು ಸುತ್ತುವರೆದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಮತ್ತು ಗಾಯಾಳುಗಳಿಗೆ ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯ ಸ್ಥಳೀಯ ನಿವಾಸಿಗಳು ಆಸ್ಪತ್ರೆಯಲ್ಲಿ ಜಮಾಯಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಬನ್ನು ಪೊಲೀಸ್ ಠಾಣೆ ಸ್ಫೋಟದ ಸಂದರ್ಭದಲ್ಲಿ ಪಾಕಿಸ್ತಾನ ಕ್ರಮ ಸೋಮವಾರ (ಮೇ 11, 2026) ವಿದೇಶಾಂಗ ಕಚೇರಿಯು ಅಫ್ಘಾನ್ ಚಾರ್ಜ್ ಡಿ'ಅಫೇರ್ಸ್ ಅವರನ್ನು ಕರೆಸಿ, ಬನ್ನುನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಅಫ್ಘಾನ್ ತಾಲಿಬಾನ್ ಆಡಳಿತಕ್ಕೆ ಬಲವಾದ ಪ್ರತಿಭಟನಾ ಟಿಪ್ಪಣಿಯನ್ನು ಸಲ್ಲಿಸಿತು.