ಹಿಂದೂ ಎಂದು ಸಾಬೀತುಪಡಿಸಲು ದೇವಸ್ಥಾನಕ್ಕೆ ಹೋಗಲೇ ಬೇಕೆಂದಿಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದ್ದು, ಅದನ್ನು ಸಾಬೀತುಪಡಿಸಲು ಕಡ್ಡಾಯವಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಅಥವಾ ಧಾರ್ಮಿಕ ವಿಧಿವಿಧಾನಗಳನ್ನು ನೆರೆವೇರಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ. ಶಬರಿಮಲೆ ಸೇರಿದಂತೆ ದೇಶದ ವಿವಿಧೆಡೆ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನಡೆಸುತ್ತಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಬಿ.ವಿ ನಾಗರತ್ನ, ಎಂ.ಎಂ ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಅಗಸ್ಟೀನ್ ಜಾರ್ಜ್ ಮಸೀಹ್, ಪ್ರಸನ್ನ ಬಿ. ವರಾಳೆ, ಆರ್.ಮಹಾದೇವನ್ ಅವರು ಈ ಪೀಠದಲ್ಲಿದ್ದಾರೆ.
ವಿಚಾರಣೆಯ 15ನೇ ದಿನವಾದ ಇಂದು ವಾದ ಮಂಡಿಸಿದ ಮಧ್ಯಸ್ಥಿಕೆದಾರರ ಪರ ವಕೀಲ ಡಾ. ಜಿ. ಮೋಹನ್ ಗೋಪಾಲ್ ಅವರು, ಧಾರ್ಮಿಕ ಸಮುದಾಯಗಳ ಒಳಗಿನಿಂದಲೇ ಸಾಮಾಜಿಕ ನ್ಯಾಯಕ್ಕಾಗಿ ಬೇಡಿಕೆಗಳು ಉದ್ಭವಿಸುತ್ತಿವೆ ಎಂದು ಪ್ರತಿಪಾದಿಸಿದರು. ‘ಹಿಂದೂ ಧರ್ಮವನ್ನು ಒಂದು ಧಾರ್ಮಿಕ ವರ್ಗವಾಗಿ ವ್ಯಾಖ್ಯಾನಿಸಲಾಗಿದೆ. ತದನಂತರ, 1966ರಲ್ಲಿ, ವೇದವನ್ನು ಸರ್ವೋಚ್ಚ ಎಂದು ಯಾರು ಒಪ್ಪಿಕೊಳ್ಳುತ್ತಾರೋ ಅವರು ಹಿಂದೂ ಎಂದು ತೀರ್ಪು ನೀಡಲಾಗಿತ್ತು. ಆದರೆ ನಮ್ಮಲ್ಲಿ ಯಾರೂ ಹಾಗೆ ಹೇಳಿರಲಿಲ್ಲ’ ಎಂದರು. ಮುಂದುವರಿದು, ‘ನನಗೆ ವೇದಗಳ ಬಗ್ಗೆ ಅತ್ಯಂತ ಗೌರವವಿದೆ. ಆದರೆ ಇಂದು ‘ಹಿಂದೂ’ ಎಂದು ವರ್ಗೀಕರಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು ವೇದಗಳನ್ನು ಸರ್ವೋಚ್ಚ ಎಂದು ಒಪ್ಪಿಕೊಳ್ಳುತ್ತಾರೆಂಬುವುದು ಸತ್ಯವೇ?’ ಎಂದು ಪ್ರಶ್ನಿಸಿದರು.
ಈ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, ‘ಹಿಂದೂ ಧರ್ಮವನ್ನು ದೀರ್ಘಕಾಲದಿಂದಲೂ ಒಂದು ಜೀವನ ವಿಧಾನವೆಂದು ಅರ್ಥೈಸಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿಯು ಹಿಂದೂವಾಗಿ ಉಳಿಯಲು ಕಡ್ಡಾಯವಾಗಿ ದೇವಸ್ಥಾನಕ್ಕೆ ಭೇಟಿ ನೀಡಬೇಕಾಗಿಲ್ಲ ಅಥವಾ ಧಾರ್ಮಿಕ ವಿಧಿವಿಧಾನಗಳನ್ನು ಮಾಡಬೇಕಾಗಿಲ್ಲ’ ಎಂದು ಹೇಳಿದರು. ‘ನಂಬಿಕೆಯು ವೈಯಕ್ತಿಕವಾದುದು. ಒಬ್ಬ ವ್ಯಕ್ತಿಯು ಧಾರ್ಮಿಕ ಆಚರಣೆಗಳನ್ನು ಮಾಡದ ಕಾರಣಕ್ಕೆ ಅವರ ಆಧ್ಯಾತ್ಮಿಕ ನಂಬಿಕೆಗಳಿಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ’ ಎಂದರು. ತಮ್ಮ ಮನೆಯ ಅಥವಾ ಗುಡಿಸಲಿನ ಒಳಗೆ ದೀಪವನ್ನು ಹಚ್ಚುವುದು ಕೂಡ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಯನ್ನು ಪ್ರದರ್ಶಿಸಲು ಸಾಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸೇರಿಸಿದರು.