Russia Satan 2 missile: ಸಟಾನ್ 2 ಕ್ಷಿಪಣಿ, ಪುಟಿನ್ ಕೈಗೆ ಬಂದ ಬ್ರಹ್ಮಾಸ್ತ್ರ!
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಂಗಳವಾರ ಮಾಸ್ಕೋದಲ್ಲಿ ಒಂದು ವಿಶೇಷ ಘೋಷಣೆ ಮಾಡಿದರು. ರಷ್ಯಾದ ಶಕ್ತಿಶಾಲಿ, ನೂತನ ಪರಮಾಣು ಕ್ಷಿಪಣಿಯಾದ ಆರ್‌ಎಸ್-28 ಸರ್ಮಾಟ್ ಈ ವರ್ಷಾಂತ್ಯದ ವೇಳೆಗೆ ಸಿದ್ಧಗೊಳ್ಳಲಿದೆ ಎಂದರು. 'ಇದು ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಕ್ಷಿಪಣಿ' ಎಂದು ಪುಟಿನ್ ಹೆಮ್ಮೆಯಿಂದ ಘೋಷಿಸಿದರು. ಕಳೆದ ಹಲವಾರು ವರ್ಷಗಳಿಂದ ನಿರ್ಮಾಣದ ಹಂತದಲ್ಲಿರುವ ಈ ಕ್ಷಿಪಣಿ ವಿವಿಧ ತಾಂತ್ರಿಕ ಸಮಸ್ಯೆಗಳು ಮತ್ತು ವಿಳಂಬಗಳಿಂದಾಗಿ ಇಷ್ಟು ತಡವಾಗಿ ಅಂತಿಮ ಹಂತಕ್ಕೆ ತಲುಪಿದೆ. ಆರ್‌ಎಸ್-28 ಸರ್ಮಾಟ್ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು, ಅಮೆರಿಕ, ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಸಾವಿರಾರು ಮೈಲಿ ದೂರದಲ್ಲಿರುವ ದೇಶಗಳಲ್ಲಿನ ಗುರಿಗಳ ಮೇಲೂ ದಾಳಿ ನಡೆಸುವ ರೀತಿಯಲ್ಲಿ ನಿರ್ಮಾಣಗೊಂಡಿದೆ.
ಸರಳವಾಗಿ ವಿವರಿಸುವುದಾದರೆ, ಈ ಕ್ಷಿಪಣಿ ರಷ್ಯಾದ ಶತ್ರುಗಳಿಗೆ ಗಂಭೀರ ಅಪಾಯ ತಂದೊಡ್ಡುವ ರೀತಿಯ ದೀರ್ಘ ವ್ಯಾಪ್ತಿಯ ಆಯುಧವಾಗಿದೆ. ಈ ಕ್ಷಿಪಣಿಯ ಪರಮಾಣು ಸಾಮರ್ಥ್ಯ ಪಾಶ್ಚಾತ್ಯ ದೇಶಗಳು ನಿರ್ಮಿಸಿರುವ ಇದೇ ಮಾದರಿಯ ಕ್ಷಿಪಣಿಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಪುಟಿನ್ ಹೇಳಿದ್ದಾರೆ. ಈ ಕ್ಷಿಪಣಿ 35,000 ಕಿಲೋಮೀಟರ್‌ಗೂ ಹೆಚ್ಚು, ಅಂದರೆ ಅಂದಾಜು 21,750 ಮೈಲಿ ದೂರ ಸಾಗಬಲ್ಲದು ಎಂದು ಪುಟಿನ್ ಘೋಷಿಸಿದ್ದಾರೆ. ಇದು ಕ್ಷಿಪಣಿಯನ್ನು ಅತ್ಯಂತ ದೀರ್ಘ ವ್ಯಾಪ್ತಿಯ ಕ್ಷಿಪಣಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿಸಿದೆ. ಸರ್ಮಾಟ್ ಕ್ಷಿಪಣಿ ಈಗಿರುವ ಮತ್ತು ಭವಿಷ್ಯದ ಎಲ್ಲ ಕ್ಷಿಪಣಿ ನಿರೋಧಕ ರಕ್ಷಣಾ ವ್ಯವಸ್ಥೆಗಳನ್ನು ಭೇದಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ ಎಂದು ಪುಟಿನ್ ಹೇಳಿದ್ದಾರೆ. ಅಂದರೆ, ಒಳಬರುವ ಕ್ಷಿಪಣಿಗಳನ್ನು ತಡೆಗಟ್ಟುವ ಸಲುವಾಗಿ ವಿನ್ಯಾಸಗೊಂಡಿರುವ ಆಧುನಿಕ ಕ್ಷಿಪಣಿಗಳೂ ಇದನ್ನು ತಡೆಯಲು ವಿಫಲವಾಗಬಹುದು. ಆದರೆ, ಈ ಕ್ಷಿಪಣಿ ಯಾವಾಗಲೂ ಯಶಸ್ಸನ್ನೇ ಕಂಡಿಲ್ಲ. ಪಾಶ್ಚಾತ್ಯ ತಜ್ಞರ ಪ್ರಕಾರ, ಸೆಪ್ಟೆಂಬರ್ 2024ರಲ್ಲಿ ನಡೆಸಿದ ಪರೀಕ್ಷೆಯೊಂದರಲ್ಲಿ ಈ ಕ್ಷಿಪಣಿ ಭಾರೀ ವೈಫಲ್ಯ ಕಂಡಿದ್ದು, ಉಡಾವಣಾ ಸ್ಥಳದಲ್ಲಿ ಬೃಹತ್ ಹೊಂಡ ಉಂಟಾಗಿತ್ತು.
ಹಿಂದಿನ ವೈಫಲ್ಯಗಳ ಹೊರತಾಗಿಯೂ, ಮಿಲಿಟರಿ ಕಮಾಂಡರ್ ಸರ್ಗೇ ಕರಾಕಯೆವ್ ಅವರು ಮಂಗಳವಾರ ನಡೆಸಿದ ಸರ್ಮಾಟ್ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ನೆರವೇರಿದೆ ಎಂದು ಪುಟಿನ್ ಬಳಿ ಹೇಳಿರುವುದನ್ನು ರಷ್ಯನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ಕ್ಷಿಪಣಿಯನ್ನು ಸೇನಾ ಬಳಕೆಗೆ ನಿಯೋಜಿಸುವುದರಿಂದ ರಷ್ಯಾದ ಭೂ ಪರಮಾಣು ಪಡೆಗಳಿಗೆ ಭಾರೀ ಬಲವರ್ಧನೆ ಲಭಿಸಲಿದೆ ಎಂದು ಕರಾಕಯೆವ್ ಹೇಳಿದ್ದಾರೆ. ಇದು ದೇಶದ ಕಾರ್ಯತಂತ್ರದ ರಕ್ಷಣಾ ಸಾಮರ್ಥ್ಯವನ್ನೂ ವೃದ್ಧಿಸಲಿದ್ದು, ಶತ್ರುಗಳು ಗಂಭೀರ ಪ್ರತಿದಾಳಿಯ ಆತಂಕ ಹೊಂದಿ, ರಷ್ಯಾ ವಿರುದ್ಧ ದಾಳಿ ನಡೆಸಲು ಹಿಂದೇಟು ಹಾಕುಬ ಸಾಧ್ಯತೆಗಳಿವೆ.