HESCOM Profit: 15 ಕೋಟಿ 47 ಲಕ್ಷ ರೂಪಾಯಿ ಲಾಭದಲ್ಲಿದೆ ಹೆಸ್ಕಾಂ, ಗ್ರಾಹಕರ ಜೇಬಿಗೆ ವಾಪಸ್ ಬರಲಿದೆ ಹಣ!
ಹಾವೇರಿ: ಸದಾ ಕರೆಂಟ್ ಬಿಲ್ (Current Bill) ಏರಿಕೆಯಿಂದ ಕಂಗೆಟ್ಟಿದ್ದ ಸಾರ್ವಜನಿಕರಿಗೆ (Public) ಇದೀಗ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (HESCOM) ಕಡೆಯಿಂದ ಬಿಗ್ ರಿಲೀಫ್ ಸಿಕ್ಕಿದೆ. ಹೌದು, ಜನಸಾಮಾನ್ಯರ ಮೇಲೆ ಹೊರೆ ತಗ್ಗಿಸಲು ಮುಂದಾಗಿರುವ ಹೆಸ್ಕಾಂ, ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 10 ಪೈಸೆ (10 Paisa) ಕಡಿತ ಮಾಡುವ ನಿರ್ಧಾರವನ್ನು ಪ್ರಕಟಿಸಿದೆ.
ಹಾವೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಅವರು ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. 2024-25ರ ಸಾಲಿನಲ್ಲಿ ಹೆಸ್ಕಾಂ ಇಲಾಖೆಯು ಅಕ್ಷರಶಃ ಲಾಭದ ಹಳಿಗೆ ಮರಳಿದೆ. ಬರೋಬ್ಬರಿ 15 ಕೋಟಿ 47 ಲಕ್ಷ ರೂಪಾಯಿ ಲಾಭವನ್ನು ಗಳಿಸಿರುವ ಸಂಸ್ಥೆ, ಈ ಲಾಭದ ಹಣವನ್ನು ತನ್ನಲ್ಲಿ ಇಟ್ಟುಕೊಳ್ಳುವ ಬದಲು, ನೇರವಾಗಿ ಗ್ರಾಹಕರಿಗೆ ರಿಫಂಡ್ ಮಾಡಲು ಮುಂದಾಗಿದೆ.
ನೀವು ಬಳಸುವ ಪ್ರತಿ ಯೂನಿಟ್ ವಿದ್ಯುತ್‍ಗೆ 10 ಪೈಸೆಯಂತೆ ಹಣ ವಾಪಸ್ ಸಿಗಲಿದೆ. ಇದು ಒಂದೇ ಬಾರಿಗೆ ಸಿಗುವ ಹಣವಲ್ಲ, ಬದಲಾಗಿ ನಿಮ್ಮ ಪ್ರತಿ ತಿಂಗಳ ವಿದ್ಯುತ್ ಬಿಲ್‍ನಲ್ಲಿ ಸಮಾನ ಕಂತುಗಳಲ್ಲಿ ಈ ಹಣ ರಿಫಂಡ್ ಆಗಲಿದೆ. ಅಂದರೆ, ಮುಂದಿನ ದಿನಗಳಲ್ಲಿ ನೀವು ಕಟ್ಟುವ ಬಿಲ್ ಮೊತ್ತ ಸ್ವಲ್ಪ ಮಟ್ಟಿಗೆ ಕಡಿಮೆ ಆಗುವುದು ಖಚಿತ.
ಗ್ರಾಹಕರ ಹಿತದೃಷ್ಟಿಯಿಂದ ಮತ್ತು ಇಲಾಖೆಯ ಪಾರದರ್ಶಕ ಲಾಭಾಂಶವನ್ನು ಹಂಚಿಕೊಳ್ಳುವ ಉದ್ದೇಶದಿಂದ ಈ ಐತಿಹಾಸಿಕ ಆದೇಶ ಹೊರಡಿಸಲಾಗಿದೆ. ಬೆಲೆ ಏರಿಕೆಯ ಈ ಕಾಲದಲ್ಲಿ 10 ಪೈಸೆ ಅಲ್ಪ ಎನಿಸಿದರೂ, ಪ್ರತಿ ತಿಂಗಳ ಲಕ್ಷಾಂತರ ಯೂನಿಟ್ ಬಳಕೆಯ ಲೆಕ್ಕದಲ್ಲಿ ಇದು ಗ್ರಾಹಕರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಲಿದೆ.