ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜೂನ್‌ನಿಂದ ಓಡಲಿದೆ ಸೂಪರ್ ಫಾಸ್ಟ್ ರೈಲು; ಬೆಳಗಾವಿ, ಹುಬ್ಬಳ್ಳಿ ಜನರಿಗೂ ಲಾಭ!
ಬೆಂಗಳೂರು ಮತ್ತು ಮುಂಬೈ ನಡುವಿನ ದಶಕಗಳ ಬೇಡಿಕೆಯಾಗಿದ್ದ ಸೂಪರ್‌ಫಾಸ್ಟ್ ರೈಲು ಜೂನ್ ಅಂತ್ಯದಿಂದ ಸಂಚಾರ ಆರಂಭಿಸಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನುಮೋದಿಸಿದ್ದಾರೆ. ಈ ರೈಲು ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೂಲಕ ಸಾಗಿ, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಭವಿಷ್ಯದಲ್ಲಿ ಇದನ್ನು ವಂದೇ ಭಾರತ್ ಸ್ಲೀಪರ್ ಆಗಿ ಪರಿವರ್ತಿಸುವ ಯೋಜನೆಯೂ ಇದೆ.
ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಪ್ರಲ್ಹಾದ್ ಜೋಶಿ ಅವರು, ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ, ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಸಚಿವರು ಹಸಿರು ನಿಶಾನೆ ತೋರಿಸಿದ್ದು, ಮುಂದಿನ ಕೆಲವು ವಾರಗಳಲ್ಲಿ ಇದರ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಸಂಚರಿಸುವ ಪ್ರಮುಖ ನಗರಗಳು: ಈ ಹೊಸ ರೈಲು ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಈ ಭಾಗದ ಪ್ರಯಾಣಿಕರಿಗೆ ಮುಂಬೈ ತಲುಪಲು ಸುಲಭವಾಗಲಿದೆ.
ಪ್ರಸ್ತುತ ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಅಥವಾ ವಿಮಾನ ಯಾನವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಈ ಸೂಪರ್ ಫಾಸ್ಟ್ ರೈಲು ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿಸಲಿದ್ದು, ಭವಿಷ್ಯದಲ್ಲಿ ಇದನ್ನು ‘ವಂದೇ ಭಾರತ್ ಸ್ಲೀಪರ್’ ರೈಲನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಯೂ ಇದೆ ಎಂದು ಜೋಶಿ ತಿಳಿಸಿದ್ದಾರೆ.