ರಾಜ್ಯದ 5.55 ಕೋಟಿ ಮತದಾರರೇ ಗಮನಿಸಿ: ಜೂನ್ 30 ರಿಂದ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯ ಆರಂಭ!
ನವದೆಹಲಿ/ಬೆಂಗಳೂರು (ಮೇ 14): ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ - ಹಂತ 3' (Special Intensive Revision - Phase III) ನಡೆಸಲು ಆಯೋಗವು ನಿರ್ದೇಶನ ನೀಡಿದೆ.
ಪ್ರಸ್ತುತ ನಡೆಯುತ್ತಿರುವ ಜನಗಣತಿಯ ಮನೆ ಪಟ್ಟಿ ಮಾಡುವ ಕಾರ್ಯದೊಂದಿಗೆ ಸಮನ್ವಯ ಸಾಧಿಸಲು ಈ SIR ಹಂತ-3ರ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೊರತುಪಡಿಸಿ, ಈ ಹಂತದೊಂದಿಗೆ ಇಡೀ ದೇಶವು ಮತದಾರರ ಪಟ್ಟಿ ಪರಿಷ್ಕರಣೆ ವ್ಯಾಪ್ತಿಗೆ ಒಳಪಡಲಿದೆ. ಈ ಮೂರು ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ಹಿಮಪಾತದ ಕಾರಣದಿಂದಾಗಿ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಈ ಮೂರನೇ ಹಂತದಲ್ಲಿ ದೇಶಾದ್ಯಂತ ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು 36.73 ಕೋಟಿ ಮತದಾರರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಇವರಿಗೆ ರಾಜಕೀಯ ಪಕ್ಷಗಳಿಂದ ನೇಮಕಗೊಂಡ 3.42 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳು (BLAs) ಸಹಕರಿಸಲಿದ್ದಾರೆ. ಈ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕತೆಯಿಂದ ಕೂಡಿದ್ದು, ಪ್ರತಿಯೊಬ್ಬ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವ ಗುರಿಯನ್ನು ಹೊಂದಿದೆ.