ತಮಿಳುನಾಡು ಚುನಾವಣೆಯಲ್ಲಿ ಮತದಾನ ಮಾಡಿದ 10 ವಿದೇಶಿಗರ ಬಂಧನ: ತನಿಖೆಗೆ ಇ.ಸಿ ಆದೇಶ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೆಲವು ವಿದೇಶಿ ಪ್ರಜೆಗಳು ಮೋಸದಿಂದ ಮತದಾನ ಮಾಡಿರುವುದು ಪತ್ತೆಯಾಗಿದ್ದು, ಇದರ ಕುರಿತು ತನಿಖೆ ಕೈಗೊಳ್ಳಲು ಚುನಾವಣಾ ಆಯೋಗವು ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏ. 23ರಂದು ವಿಧಾನಸಭಾ ಚುನಾವಣೆಯ ಮತದಾನ ನಡೆದಿತ್ತು. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ವಿದೇಶಕ್ಕೆ ಪ್ರಯಾಣಿಸಲು ತೆರಳುತ್ತಿದ್ದ ಕೆಲವು ವಿದೇಶಿ ಪ್ರಜೆಗಳ ತೋರು ಬೆರಳುಗಳ ಮೇಲೆ ಅಳಿಸಲಾಗದ ಶಾಯಿ ಗುರುತನ್ನು ಗಮನಿಸಿದ ವಿಮಾನ ನಿಲ್ದಾಣದ ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, 10 ಜನ ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಮತದಾನ ಮಾಡಿದ ಆರೋಪದ ಮೇಲೆ 9 ವಿವಿಧ ಪ್ರಕರಣಗಳಲ್ಲಿ 10 ಜನರನ್ನು ಬಂಧಿಸಲಾಗಿದೆ. ಅವರನ್ನು ಚೆನ್ನೈ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ ಬಂಧಿಸಲಾಗಿದೆ. ತನಿಖೆಯ ನಂತರ ಅವರು ಶ್ರೀಲಂಕಾ, ಬ್ರಿಟನ್ ಮತ್ತು ಕೆನಡಾದ ಪ್ರಜೆಗಳು ಎನ್ನುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರ ವರದಿಯ ಆಧಾರದಲ್ಲಿ ಚುನಾವಣಾ ಆಯೋಗವು ಕ್ರಮಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.