ಭಾರತ-ನೆದರ್ಲೆಂಡ್ಸ್ ನಡುವೆ ಐತಿಹಾಸಿಕ 17 ಒಪ್ಪಂದಗಳಿಗೆ ಸಹಿ
ದಿ ಹೇಗ್ (ನೆದರ್ಲೆಂಡ್ಸ್): ಬದಲಾಗುತ್ತಿರುವ ಜಾಗತಿಕ ಭೌಗೋಳಿಕ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಭಾರತ ಮತ್ತು ನೆದರ್ಲೆಂಡ್ಸ್ ತಮ್ಮ ಬಾಂಧವ್ಯವನ್ನು 'ಕಾರ್ಯತಂತ್ರದ ಪಾಲುದಾರಿಕೆ' (Strategic Partnership) ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿವೆ. ದ್ವಿಪಕ್ಷೀಯ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನೆದರ್ಲೆಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ ನಡುವೆ ಶನಿವಾರ ನಡೆದ ಮಹತ್ವದ ಉನ್ನತ ಮಟ್ಟದ ಸಭೆಯಲ್ಲಿ ರಕ್ಷಣೆ, ಸೆಮಿಕಂಡಕ್ಟರ್ ಮತ್ತು ಗಣಿಗಾರಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 17 ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸಭೆಯ ನಂತರ ಜಂಟಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಕಳೆದ ಒಂದು ದಶಕದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಸಂಬಂಧ ಅಭೂತಪೂರ್ವವಾಗಿ ಬೆಳೆದಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಜವಾಬ್ದಾರಿಯುತ ನಡವಳಿಕೆ ನಮ್ಮಿಬ್ಬರ ಸಾಮಾನ್ಯ ಸಿದ್ಧಾಂತವಾಗಿದೆ" ಎಂದರು. ಒಪ್ಪಂದಗಳ ಪ್ರಮುಖ ಮುಖ್ಯಾಂಶಗಳು ರಕ್ಷಣಾ ಕೈಗಾರಿಕಾ ರೋಡ್‌ಮ್ಯಾಪ್: ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಉದ್ಯಮಗಳ ಸ್ಥಾಪನೆಯ ಮೂಲಕ ರಕ್ಷಣಾ ಉಪಕರಣಗಳು, ವ್ಯವಸ್ಥೆಗಳು ಮತ್ತು ಬಿಡಿಭಾಗಗಳ ಜಂಟಿ ಉತ್ಪಾದನೆಗೆ ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ.
ಸೆಮಿಕಂಡಕ್ಟರ್ ಕ್ರಾಂತಿ: ಭಾರತದ ಸೆಮಿಕಂಡಕ್ಟರ್ ಮಿಷನ್ (ISM) ಅನ್ನು ಡಚ್ ಸೆಮಿಕಂಡಕ್ಟರ್ ಕಾಂಪಿಟೆನ್ಸ್ ಸೆಂಟರ್‌ನೊಂದಿಗೆ ಜೋಡಿಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ 'ಟಾಟಾ ಎಲೆಕ್ಟ್ರಾನಿಕ್ಸ್' ಮತ್ತು ವಿಶ್ವಪ್ರಸಿದ್ಧ 'ASML' ಕಂಪನಿ ನಡುವೆ ಗುಜರಾತ್‌ನ ಧೋಲೇರಾ ಸೆಮಿಕಂಡಕ್ಟರ್ ಪ್ಲಾಂಟ್‌ಗೆ ಸಂಬಂಧಿಸಿದಂತೆ ಪ್ರಮುಖ ಒಪ್ಪಂದ ನಡೆದಿದೆ. ಗ್ರೀನ್ ಹೈಡ್ರೋಜನ್: ಉಭಯ ದೇಶಗಳ ಸುಸ್ಥಿರ ಇಂಧನ ಅಭಿವೃದ್ಧಿಗಾಗಿ 'ಭಾರತ-ನೆದರ್ಲೆಂಡ್ಸ್ ಗ್ರೀನ್ ಹೈಡ್ರೋಜನ್ ರೋಡ್‌ಮ್ಯಾಪ್' ಅನ್ನು ಬಿಡುಗಡೆ ಮಾಡಲಾಗಿದೆ. ವಲಸೆ ಮತ್ತು ಉದ್ಯೋಗಾವಕಾಶ: ಭಾರತೀಯ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನೆದರ್ಲೆಂಡ್ಸ್‌ಗೆ ಸುಲಭವಾಗಿ ವಲಸೆ ಹೋಗಲು ಅನುಕೂಲವಾಗುವಂತೆ ವಿಶೇಷ ವಲಸೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.