ತಿರುಪತಿಯ ಸಾಮಾನ್ಯ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಟಿಟಿಡಿ
ತಿರುಪತಿ (ಮೇ.22): ಕಲಿಯುಗದ ಪ್ರತ್ಯಕ್ಷ ದೈವ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಬರುವ ಸಾಮಾನ್ಯ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನದ (TTD) ಆಡಳಿತ ಮಂಡಳಿಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮೇಲೆ ಸಾಮಾನ್ಯ ಭಕ್ತರು ತಿರುಪತಿಯಲ್ಲಿ ಗಂಟೆಗಟ್ಟಲೆ ಕಾಯದೇ ಅತ್ಯಂತ ವೇಗವಾಗಿ ಶ್ರೀವಾರಿ ದರ್ಶನ ಪಡೆಯಲು ಟಿಟಿಡಿ ಕ್ರಾಂತಿಕಾರಿ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ಪ್ರತಿದಿನ ಮುಂಜಾನೆ ಸ್ವಾಮಿಗೆ ನಡೆಯುವ ಅತ್ಯಂತ ಪವಿತ್ರವಾದ 'ಅಭಿಷೇಕ ಸೇವೆ'ಯ (Abhishekam Seva) ಸಮಯದಲ್ಲಿಯೂ ಸಾಮಾನ್ಯ ಭಕ್ತರಿಗೆ ದರ್ಶನ ಕಲ್ಪಿಸಲು ಟಿಟಿಡಿ ಮುಂದಾಗಿದೆ.
ರಜಾದಿನಗಳ ಹಿನ್ನೆಲೆಯಲ್ಲಿ ತಿರುಮಲದಲ್ಲಿ ಭಕ್ತರ ರಶ್ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಮತ್ತು ಸಾಮಾನ್ಯ ಭಕ್ತರಿಗೆ ಮೊದಲ ಆದ್ಯತೆ ನೀಡಲು ಇತ್ತೀಚೆಗೆ ವಿಐಪಿ ಬ್ರೇಕ್ ದರ್ಶನಗಳನ್ನು (VIP Break Darshan) ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಇದರ ಯಶಸ್ಸಿನ ಬೆನ್ನಲ್ಲೇ, ಭಕ್ತರ ಅನುಕೂಲಕ್ಕಾಗಿ ಮತ್ತೊಂದು ಪ್ರಮುಖ ನಿರ್ಧಾರ ಮಾಡಲಾಗಿದೆ ಎಂದು ಟಿಟಿಡಿ ಹೆಚ್ಚುವರಿ ಇಒ (Additional EO) ವೆಂಕಯ್ಯ ಚೌದರಿ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ದಿನಕ್ಕೆ 15,000 ಭಕ್ತರಿಗೆ ಹೆಚ್ಚುವರಿ ದರ್ಶನ ಭಾಗ್ಯ! ಸ್ವಾಮಿಯ ಅಭಿಷೇಕ ಸೇವೆಯ ಸಮಯದಲ್ಲಿ ಕೇವಲ ಗಣ್ಯರಿಗೆ ಮಾತ್ರ ಅವಕಾಶವಿರುತ್ತಿತ್ತು. ಆದರೆ ಈಗ ಆ ಸಮಯದಲ್ಲಿಯೂ ಸರ್ವದರ್ಶನ ಹಾಗೂ ಧರ್ಮದರ್ಶನದ ಕ್ಯೂ ಲೈನ್‌ಗಳಲ್ಲಿ ನಿಲ್ಲುವ ಸುಮಾರು 5,000 ಭಕ್ತರನ್ನು ದರ್ಶನಕ್ಕೆ ಬಿಡಲು ನಿರ್ಧರಿಸಲಾಗಿದೆ.
ಈ ಹೊಸ ವ್ಯವಸ್ಥೆಯಿಂದಾಗಿ ದಿನದ ವಿವಿಧ ಅವಧಿಗಳನ್ನು ಲೆಕ್ಕಹಾಕಿದರೆ ಪ್ರತಿದಿನ ಹೆಚ್ಚುವರಿಯಾಗಿ ಬರೋಬ್ಬರಿ 15,000 ಸಾಮಾನ್ಯ ಭಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಶ್ರೀಲಕ್ಷ್ಮೀ ವೆಂಕಟೇಶ್ವರನ ದರ್ಶನ ಭಾಗ್ಯ ಸಿಗಲಿದೆ. ಕೆಲಸ ಮಾಡುತ್ತಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ! ತಿರುಮಲದಲ್ಲಿ ಕ್ಯೂ ಲೈನ್‌ಗಳ ನಿರ್ವಹಣೆ ಮತ್ತು ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಟಿಟಿಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ 'AI ಕಮಾಂಡ್ ಕಂಟ್ರೋಲ್ ಸೆಂಟರ್' (AI Command Control Center) ಅನ್ನು ಸ್ಥಾಪಿಸಲಾಗಿದೆ. ಈ ಕೃತಕ ಬುದ್ಧಿಮತ್ತೆ ಕೇಂದ್ರವು ಪ್ರತಿ ಗಂಟೆಗೆ ಕ್ಯೂಲೈನ್‌ಗಳಲ್ಲಿರುವ ಜನರ ಸಂಖ್ಯೆ ಮತ್ತು ರದ್ದಿಯ ತೀವ್ರತೆಯನ್ನು ನಿಖರವಾಗಿ ಅಂದಾಜು ಮಾಡುತ್ತದೆ.
ಈ ಸೆಂಟರ್‌ನ ವರದಿಗೆ ಅನುಗುಣವಾಗಿ ಅಧಿಕಾರಿಗಳು ತಕ್ಷಣವೇ ಭಕ್ತರನ್ನು ದರ್ಶನಕ್ಕೆ ಬಿಡುಗಡೆ ಮಾಡುತ್ತಿರುವುದರಿಂದ ಕಾಯುವ ಸಮಯ ಗಣನೀಯವಾಗಿ ಕಡಿಮೆಯಾಗಿದೆ. ತಿರುಪತಿಯಲ್ಲೇ ಸಿದ್ಧವಾಗಲಿದೆ ಸ್ವಾಮಿಯ ನೈವೇದ್ಯದ ಶುದ್ಧ ತುಪ್ಪ! ತಿರುಪತಿಯಲ್ಲಿರುವ ಟಿಟಿಡಿಯ ಅಧಿಕೃತ 'ಎಸ್.ವಿ. ಗೋಶಾಲೆ'ಯಲ್ಲಿ (SV Goshalale) ಅತ್ಯಾಧುನಿಕ ತಂತ್ರಜ್ಞಾನದ ಶುದ್ಧ ತುಪ್ಪ ತಯಾರಿಕಾ ಕೇಂದ್ರ (Ghee Manufacturing Plant) ಹಾಗೂ 'ಸೆಂಟರ್ ಫಾರ್ ಎಕ್ಸ್‌ಲೆನ್ಸ್' ಕೇಂದ್ರದ ನಿರ್ಮಾಣ ಕಾರ್ಯ ಶರವೇಗದಲ್ಲಿ ಸಾಗುತ್ತಿದೆ. ಮುಂಬರುವ ಜುಲೈ ತಿಂಗಳ ಅಂತ್ಯದ ವೇಳೆಗೆ ಈ ಪ್ಲಾಂಟ್ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಲು ಆಂಧ್ರಪ್ರದೇಶ ಸರ್ಕಾರ ಗುರಿ ಹಾಕಿಕೊಂಡಿದೆ.
ಸದ್ಯ ಗೋಶಾಲೆಯಲ್ಲಿ ಉತ್ಪಾದನೆಯಾಗುವ ಸುಮಾರು 2,000 ಲೀಟರ್ ಹಾಲನ್ನು ಅತ್ಯಾಧುನಿಕ ಪ್ರಕ್ರಿಯೆಗೆ (Processing) ಒಳಪಡಿಸಿ, ಶ್ರೀವಾರ ನಿತ್ಯ ಕೈಂಕರ್ಯಗಳು ಹಾಗೂ ನೈವೇದ್ಯಗಳಿಗಾಗಿ ಬಳಸಲಾಗುವುದು. ಇನ್ನು ತುಪ್ಪ ತಯಾರಿಕಾ ಪ್ಲಾಂಟ್‌ನ ಶೇ. 90 ರಷ್ಟು ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಆರಂಭಿಕ ಹಂತದಲ್ಲಿ ಈ ಪ್ಲಾಂಟ್ ಮೂಲಕ ಪ್ರತಿದಿನ 80 ಕಿಲೋ ಅತ್ಯಂತ ಶುದ್ಧವಾದ ದೇಶಿ ಹಸುವಿನ ತುಪ್ಪವನ್ನು ತಯಾರಿಸಲಾಗುವುದು. ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಈ ಪ್ಲಾಂಟ್‌ನ ಸಾಮರ್ಥ್ಯವನ್ನು ದಿನಕ್ಕೆ 10,000 ಲೀಟರ್ ಹಾಲು ಸಂಸ್ಕರಣೆಗೆ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.