Gabbard:ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ಸ್ಥಾನಕ್ಕೆ ಗಬಾರ್ಡ್ ರಾಜೀನಾಮೆ
ವಾಷಿಂಗ್ಟನ್: ಇರಾನ್ ಮೇಲಿನ ಯುದ್ಧದ ವಿಚಾರದಲ್ಲಿ ಭಿನ್ನಾಭಿಪ್ರಾಯದ ಪರಿಣಾಮ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಸ್ಥಾನಕ್ಕೆ ತುಳಸಿ ಗಬ್ಬಾರ್ಡ್ (Tulsi Gabbard) ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ. ತುಳಸಿ ಗಬ್ಬಾರ್ಡ್ ಮಾಜಿ ಡೆಮಾಕ್ರಟಿಕ್ ಕಾಂಗ್ರೆಸ್ ಮಹಿಳೆಯಾಗಿದ್ದು, ಈಕೆ ಅಮೆರಿಕ ಕಾಂಗ್ರೆಸ್ ಗೆ ಆಯ್ಕೆಯಾದ ಮೊದಲ ಹಿಂದೂ-ಅಮೆರಿಕನ್ ರಾಜಕಾರಣಿಯಾಗಿದ್ದಾರೆ. ತುಳಸಿ ಅಮೆರಿಕದ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಭಗವದ್ಗೀತೆ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದರು.
2022ರವರೆಗೆ ಡೆಮಾಕ್ರಟಿಕ್ ಪಕ್ಷದಲ್ಲಿದ್ದ ತುಳಸಿ ಗಬ್ಬಾರ್ಡ್, ನಂತರ 2024ರಲ್ಲಿ ರಿಪಬ್ಲಿಕನ್ ಪಕ್ಷ ಸೇರ್ಪಡೆಗೊಂಡಿದ್ದರು. ತುಳಸಿ ಟ್ರಂಪ್ ಆಡಳಿತದಲ್ಲಿ 2025ರ ಫೆಬ್ರವರಿಯಿಂದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹುದ್ದೆ ಅಲಂಕರಿಸಿದ್ದರು. ಇರಾನ್ ಮೇಲಿನ ಯುದ್ಧದ ವಿಚಾರದಲ್ಲಿ ಟ್ರಂಪ್ ಆಡಳಿತದಲ್ಲೇ ವಿರೋಧ ವ್ಯಕ್ತವಾಗುತ್ತಿದ್ದು, ಇದು ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ತುಳಸಿ ಗಬ್ಬಾರ್ಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆನ್ನಲಾಗಿದೆ.
ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ತುಳಸಿ ಗಬ್ಬಾರ್ಡ್ ಅವರ ನಿಲುವಿನ ಬಗ್ಗೆ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ. ಕುತೂಹಲದ ವಿಚಾರವೆಂದರೆ ಇರಾನ್ ಮೇಲಿನ ಯುದ್ಧದ ವಿಚಾರದಲ್ಲಿ ಒಮ್ಮತದ ತೋರಿಸದ ಗುಪ್ತಚರ ಇಲಾಖೆಯ ನಿರ್ದೇಶಕ ಜಾಯ್ ಕೆಂಟ್ ಅವರು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ತುಳಸಿ ಗಬ್ಬಾರ್ಡ್ ನೇಮಕಗೊಂಡಿದ್ದರು.
ಆದರೆ ಈ ಸಂದರ್ಭದಲ್ಲಿ ಗಬ್ಬಾರ್ಡ್ ಅವರ ಯುದ್ಧ ವಿರೋಧಿ ನಿಲುವು ಟ್ರಂಪ್ ಆಡಳಿತದಲ್ಲಿ ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಾಗದಿರಬಹುದು ಎಂದು ಚಿಂತಕರ ಚಾವಡಿ ವಿಶ್ಲೇಷಿಸಿತ್ತು. ತುಳಸಿ ಗಬ್ಬಾರ್ಡ್ ಅವರಿಂದ ತೆರವಾದ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುತ್ತದೆ ಎಂಬ ಬಗ್ಗೆ ಶ್ವೇತಭವನ ಈವರೆಗೂ ಅಧಿಕೃತವಾಗಿ ಯಾರ ಹೆಸರನ್ನೂ ಘೋಷಣೆ ಮಾಡಿಲ್ಲ. ಆದರೆ ನಿಯಮದ ಪ್ರಕಾರ ರಾಷ್ಟ್ರೀಯ ಗುಪ್ತಚರ ವಿಭಾಗದ ಹಿರಿಯ ಉಪ ಅಧಿಕಾರಿಗೆ ತಾತ್ಮಾಲಿಕವಾಗಿ ಈ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.