ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಮುನೀಶ್ ಮೌದ್ಗಿಲ್‌ಗೆ ಹೆಚ್ಚುವರಿ ಹೊಸ ಹುದ್ದೆ ಹೊಣೆ
ಬೆಂಗಳೂರು: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹಿರಿಯ ಐಎಎಸ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಪ್ರಮುಖ ಅಧಿಕಾರಿಗಳ ಸ್ಥಳ ಬದಲಾವಣೆಗಳ ಕಾರ್ಯಕ್ಕೆ ಮುಂದಾಗಿದೆ. ಇದೀಗ 6 ಐಎಎಸ್ ಅಧಿಕಾರಿಗಳ ಜೊತೆಗೆ ಇಬ್ಬರು ಐಪಿಎಸ್ ಅಧಿಕಾರಿಗಳನ್ನೂ ಕೂಡ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲಿ ಪ್ರಮುಖವಾಗಿ ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯ ಹೆಚ್ಚುವರಿ ಹುದ್ದೆ ಹೊಣೆ ನೀಡಲಾಗಿದೆ. ಇನ್ನು ಐಪಿಎಸ್ ಅಧಿಕಾರಿಗಳಲ್ಲಿ ಮುಖ್ಯವಾಗಿ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿ ಡಾ.ಚಂದ್ರಗುಪ್ತ ಅವರನ್ನು ನೇಮಕ ಮಾಡಲಾಗಿದೆ. ಹೊಸ ಹುದ್ದೆ ಸೃಷ್ಟಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಆಡಳಿತ, ಕಂದಾಯ ಮತ್ತು ಐಟಿ) ಮುನೀಶ್ ಮೌದ್ಗಿಲ್ ಅವರಿಗೆ ಹೊಸದಾಗಿ ಸೃಜಿಸಿರುವ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಠಾನ) ಹುದ್ದೆಯ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಇನ್ನು ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಠಾನಕ್ಕೆಂದೇ ಹೆಚ್ಚುವರಿಯಾಗಿ ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ, ಮುನೀಶ್ ಮೌದ್ಗಿಲ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಕೊಡಲಾಗಿದೆ. ಈ ಹಿಂದೆ ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಅಂಜುಂ ಪರ್ವೇಜ್ ಅವರನ್ನು ಯಾವುದೇ ಹುದ್ದೆ ನೀಡದೆ ಎತ್ತಂಗಡಿ ಮಾಡಲಾಗಿತ್ತು. ಇಷ್ಟು ದಿನ ಹುದ್ದೆಯ ನಿರೀಕ್ಷಣೆಯಲ್ಲಿದ್ದ ಅಂಜುಂ ಪರ್ವೇಜ್ ಅವರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ನೀಡಿದೆ. ಅದೇ ರೀತಿ ಆಯಕಟ್ಟಿನ ಹುದ್ದೆಯಲ್ಲಿದ್ದ ಬಿ.ಬಿ.ಕಾವೇರಿ ಅವರನ್ನೂ ಸ್ಥಳ ತೋರಿಸದೆ ವರ್ಗಾಯಿಸಿದ್ದ ಸರ್ಕಾರ, ಇದೀಗ ನಗರಾಭಿವೃದ್ಧಿ ಇಲಾಖೆ (ಮುನ್ಸಿಪಾಲ್ಟಿಗಳು) ಕಾರ್ಯದರ್ಶಿ ಹುದ್ದೆ ನೀಡಿದೆ. ಈ ಹುದ್ದೆಯಲ್ಲಿದ್ದ ದೀಪಾ ಚೋಳನ್ ಅವರನ್ನು ಸಾರಿಗೆ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾಯಿಸಿದ್ದು ಈ ಹುದ್ದೆಯಲ್ಲಿದ್ದ ಡಾ.ಎನ್.ವಿ. ಪ್ರಸಾದ್ ಅವರಿಗೆ ಯಾವುದೇ ಹುದ್ದೆ ತೋರಿಸದೆ ವರ್ಗಾಯಿಸಿದೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿ ಡಾ. ಎಂ.ವಿ.ವೆಂಕಟೇಶ್ ಅವರನ್ನು ಖಾಲಿ ಇರುವ ಸಹಕಾರ ಸೊಸೈಟಿಗಳ ರಿಜಿಸ್ಟ್ರಾರ್ ಹುದ್ದೆಗೆ ವರ್ಗಾಯಿಸಿದೆ.
ಅಂತೆಯೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಡಿ ಆಗಿರುವ ಡಾ. ಆರ್.ಸೆಲ್ವಮಣಿ ಅವರನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾಗಿ ವರ್ಗಾಯಿಸಿದ್ದು ಈ ಹುದ್ದೆಯಲ್ಲಿದ್ದ ಎ.ಎಂ. ಯೋಗೀಶ್ ಅವರಿಗೆ ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿದೆ. ಸಿಎಂ ಆಪ್ತ ಕಾರ್ಯದರ್ಶಿಯಾಗಿ ನೇಮಕವಾದ ರಾಜೇಂದ್ರ ಪ್ರಸಾದ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಕೆಎಎಸ್ ಅಧಿಕಾರಿ ಡಾ.ರಾಜೇಂದ್ರ ಪ್ರಸಾದ್ ಎಂ.ಎನ್. ಅವರನ್ನು ಶನಿವಾರವಷ್ಟೇ ನೇಮಕ ಮಾಡಲಾಗಿತ್ತು. ರಾಜೇಂದ್ರ ಪ್ರಸಾದ್ ಅವರು ಈ ಹುದ್ದೆಯಲ್ಲಿ ಮುಂದಿನ ಆದೇಶದವರೆಗೆ ಅಥವಾ ಮುಖ್ಯಮಂತ್ರಿಯವರ ಪದಾವಧಿಯರೆಗೆ ಮುಂದುವರಿಯಲಿದ್ದಾರೆ. ಐಜಿಪಿ ಡಾ.ಚಂದ್ರಗುಪ್ತ ಗುಪ್ತಚರ ವಿಭಾಗದ ಮುಖ್ಯಸ್ಥ ಐಎಎಸ್ ಅಧಿಕಾರಿಗಳ ಜೊತೆಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ಚಂದ್ರಗುಪ್ತ ಅವರನ್ನು ರಾಜ್ಯ ಗುಪ್ತಚರ ವಿಭಾಗದ ಮುಖ್ಯಸ್ಥರನ್ನಾಗಿ (ಐಜಿಪಿ) ಆಗಿ ವರ್ಗಾವಣೆಗೊಳಿಸಿ ನೇಮಕ ಮಾಡಿದೆ. ಸದ್ಯ ಅವರು ಭದ್ರತಾ (ಗುಪ್ತಚರ) ವಿಭಾಗದ ಐಜಿಪಿ ಆಗಿದ್ದಾರೆ. ಗುಪ್ತಚರ ವಿಭಾಗದ ಮುಖ್ಯಸ್ಥ ಲಾಬೂರಾಮ್ ಅವರನ್ನು ವರ್ಗಾವಣೆ ಮಾಡಲಾಗಿದೆ.